ಬಳ್ಳಾರಿ : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಭಯದ ವಾತವರಣದಲ್ಲಿಯೇ ವಿದ್ಯಾರ್ಥಿಗಳು ಕಲಿಯುವಂತೆಯಾಗಿದೆ.
ಜಿಲ್ಲಾದ್ಯಂತ 595 ಪ್ರಾಥಮಿಕ, 125 ಪ್ರೌಢ ಶಾಲೆಗಳಿವೆ. ಲಕ್ಷಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ಶಾಲೆಗಳ ಉನ್ನತೀಕರಣ, ಕೊಠಡಿ ನಿರ್ಮಾಣ ಕಾರ್ಯ ನಿರಂತರವಾಗಿದ್ದರೂ ಜಿಲ್ಲೆಯಲ್ಲಿ ಶಿಥಿಲಗೊಂಡ ಕಟ್ಟಡಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇತ್ತೀಚಿಗೆ ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿ ಛಾವಣಿ ಕುಸಿದು ವಿದ್ಯಾರ್ಥಿಗೆ ತಲೆಗೆ ತಗುಲಿ ಅವಘಡ ಸಂಭವಿಸಿತ್ತು. ಅದರಂತೆ, ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೊಠಡಿಗಳು ಶಿಥಿಲಾಗೊಂಡಿದ್ದು ಮಕ್ಕಳಿಗೆ ಸಮಸ್ಯೆಯಾಗುವ ಭೀತಿ ಪಾಲಕರಲ್ಲಿದೆ.
ಜಿಲ್ಲಾದ್ಯಂತ ಬಳ್ಳಾರಿ ಪೂರ್ವ 268, ಬಳ್ಳಾರಿ ಪಶ್ಚಿಮ 208, ಕಂಪ್ಲಿ 86, ಸಂಡೂರು 108, ಸಿರಗುಪ್ಪ 186 ಸೇರಿದಂತೆ ಒಟ್ಟಾರೆ 856 ಕೊಠಡಿಗಳು ಬಳಕೆಗೆ ಯೋಗ್ಯವಾಗಿಲ್ಲವೆಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಲ್ಲದೆ, ಜಿಲ್ಲಾದ್ಯಂತ 6235 ಶಾಲಾ ಕೊಠಡಿಗಳಲ್ಲಿ 4141 ಸುಸ್ಥಿತಿಯಲ್ಲಿದ್ದು 1238 ಕೊಠಡಿಗಳು ದುರಸ್ತಿಗೊಳಿಸಬೇಕಿದೆ. ಆದರೆ, ಇತ್ತೀಚಿನ ಮಳೆಯಿಂದ ದಿನೇದಿನೆ ದುರಸ್ತಿ ಕೊಠಡಿಗಳಲ್ಲಿ ಮೇಲಛಾವಣಿ ಕುಸಿಯುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ಬಾಕ್ಸ್ : ಜಿಲ್ಲೆಯ ಶಾಲೆಗಳಿಗೆ ಸೂಕ್ತ ರಸ್ತೆಯಿಲ್ಲದೆ ವಿದ್ಯಾರ್ಥಿಗಳು ತೆರಳಲು ಪರದಾಡಬೇಕಿದೆ. ಮಳೆಯಿಂದ ಮೈದಾನಗಳು ಕೆರೆಗಳಾಗಿ ಮಾರ್ಪಾಟ್ಟಿವೆ. ಬಿಡಾಡಿ ದನ, ಹಂದಿಗಳ ವಾಸಸ್ಥಾನವಾಗಿದೆ. ಖಾಲಿ ಸ್ಥಳದಲ್ಲಿ ತ್ಯಾಜ್ಯ ಹರಡಿದ್ದು ಸಂರಕ್ಷಿಸಬೇಕಾದ ಇಲಾಖೆ ಅಧಿಕಾರಿಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಪಿಡಿಒ ಅಧಿಕಾರಿಗಳು ಮೈಮರೆತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷೃತನ : ಶಿಕ್ಷಣ ಇಲಾಖೆ ಬಹುತೇಕ ಕಾಮಗಾರಿಗಳನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ನೀಡಲಾಗಿದೆ. ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸಣ್ಣಪುಟ್ಟ ಮತ್ತು ದೊಡ್ಡಮಟ್ಟದ ರಿಪೇರಿಗೆ ಶಿಕ್ಷಣ ಇಲಾಖೆ, ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ, ಡಿಎಂಎಫ್, ಕೆಕೆಆರ್‌ಡಿಬಿ ಸೇರಿ ಇತರ ಅನುದಾನ ಹಂಚಿಕೆಯಾಗಿದೆ. ಆದರೆ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಳಿಸುತ್ತಿಲ್ಲ. ಬೇರೆ ಇಲಾಖೆಯ ಕಾರ್ಯ ಎಂಬುದಾಗಿ ಅಧಿಕಾರಿಗಳ ನಿರ್ಲಕ್ಷೃತನ ಹಾಗೂ ಸಿಬ್ಬಂದಿ ಕೊರತೆಯಿಂದ ಮುತವರ್ಜಿವಹಿಸುವ ಕೆಲಸ ಮಾಡುತ್ತಿಲ್ಲ. ಹೆಸರಿಗೆ ಅನುದಾನ ಬಂದು ಕಾಮಗಾರಿ ನಡೆಸುತ್ತಿದ್ದರೂ ಮಕ್ಕಳಿಗೆ ಸಕಾಲಕ್ಕೆ ಹೊಸ ಕೊಠಡಿಗಳು ಸಕಾಲಕ್ಕೆ ಸಿಗುತ್ತಿಲ್ಲ. ಪೂರ್ಣಗೊಂಡ ಕೊಠಡಿಗಳಿಗೆ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಗೆ ವಿಳಂಬದಿಂದ ಉದ್ಘಾಟನೆಯಾಗದೆ ಉಳಿದಿವೆ. ಪರಿಣಾಮ ಸಮಸ್ಯೆ ಎಂದಿನಂತೆ ಮುಂದುವರೆಯುವಂತಾಗಿದೆ.
ಕೋಟ್.. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಸಾವಿನ ಜತೆ ಹೋರಾಟ ನಡೆಸುವಂತೆಯಾಗಿದೆ. ಕೊಠಡಿಗಳು ಸ್ಥಿತಿ ಗಮನಿಸಿದರೆ ಅವಘಡ ಸಂಭವಿಸಬಹುದು. ಅದರ ಹೊಣೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಹಿಸಿಕೊಳ್ಳಬೇಕಾಗುತ್ತಿದೆ. ಕೂಡಲೇ ದುರಸ್ತಿಗೊಳಿಸಲು ಕ್ರಮವಹಿಸಬೇಕು.
- ಜೋಳದರಾಶಿ ತಿಮ್ಮಪ್ಪ , ಸಂಸ್ಥಾಪಕ, ಜಿಟಿ ಫೌಂಡೇಷನ್, ಬಳ್ಳಾರಿ.
ಕೋಟ್... ಜಿಲ್ಲೆಯಲ್ಲಿ ಶಿಥಿಲಾಗೊಂಡ ಶಾಲಾ ಕಟ್ಟಡಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈಗಾಗಲೇ ಅಧಿಕಾರಿಗಳನ್ನು ಪ್ರತಿಯೊಂದು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಒದಗಿಸಿ ಎಂಬುದಾಗಿ ಸೂಚಿಸಿರುವೆ.
- ಉಮಾದೇವಿ, ಡಿಡಿಪಿಐ, ಬಳ್ಳಾರಿ.