ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಳೆದ ಸಾಲಿನ ಸ್ನಾತಕ ಪದವಿಯ 5ನೇ ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ ಪೂರ್ಣಗೊಂಡ 7 ದಿನಗಳಲ್ಲಿ ಫಲಿತಾಂಶ ಪ್ರಕಟಿಸಿ ಐತಿಹಾಸಿಕ ಸಾಧನೆ ಮೆರೆದಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ಜು. 22ರಂದು ಪರೀಕ್ಷೆಗಳು ಮುಗಿದಿರುವ ಬಿ.ಎ., ಬಿ.ಎಸ್ಸಿ., ಬಿ.ಕಾಂ, ಬಿಬಿಎ, ಬಿಸಿಎ ಸ್ನಾತಕ ಕೋರ್ಸಗಳ ಫಲಿತಾಂಶಗಳನ್ನು ಹೊರಡಿಸಿದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಯುಯುಸಿಎಂಎಸ್ ತಂತ್ರಾಂಶದ ಮೂಲಕ ವೀಕ್ಷಿಸಬಹುದಾಗಿದೆ. ಈ ಮೂಲಕ ಒಟ್ಟು 12,532 ವಿದ್ಯಾರ್ಥಿಗಳ ಫಲಿತಾಂಶವನ್ನು ವಾರದೊಳಗೆ ಪ್ರಕಟಿಸಿದ ರಾಜ್ಯದ ಪ್ರಥಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ವಿಶ್ವವಿದ್ಯಾಲಯ ಆರಂಭಗೊಂಡ 16 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಕಾಲಾವಧಿಯಲ್ಲಿ ಫಲಿತಾಂಶ ಪ್ರಕಟಿಸಿರುವುದು ವಿಶೇಷವಾಗಿದೆ.