ವಿವಿಯ ಕುಡಿಯವ ನೀರಿನ ಕೆರೆ ವಿಳಂಬ

Published on

ಬಳ್ಳಾರಿ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಹೊಸದಾಗಿ ಉದ್ದೇಶಿಸಲಾಗಿದ್ದ ಕುಡಿಯುವ ನೀರಿನ ಕೆರೆ ನಿರ್ಮಾಣವನ್ನು ಸ್ಥಗಿತಗೊಳಿಸಲಾಗಿದೆ.

ನಗರದ ಹೊರವಲಯದಲ್ಲಿರುವ ವಿವಿಯ ಆವರಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಬಾಲಕರ, ಬಾಲಕಿಯರ ವಸತಿ ನಿಲಯಗಳು, ಪಿಎಚ್‌ಡಿ ಸಂಶೋಧನಾರ್ಥಿಗಳ ಹಾಗೂ ವಿವಿ ಸಿಬ್ಬಂದಿ ಸೇರಿ ಸಾವಿರಾರು ವಿದ್ಯಾರ್ಥಿಗಳಿಗೆ ಒಂದೇ ಶುದ್ದ ಕುಡಿಯುವ ನೀರಿನ ಘಟಕ ಮಾತ್ರ ಇದೆ. ಕಳೆದ ಕೆಲ ವರ್ಷಗಳಿಂದ ತಾಲೂಕಿನ ಅಲ್ಲಿಪುರ ಕೆರೆಯಿಂದ ಪೈಪ್ ಲೈನ್ ಮೂಲಕ ವಿವಿಗೆ ನೀರು ಸರಬಾರಜು ಮಾಡಿಕೊಳ್ಳಲಾಗುತ್ತಿದೆ. ಕೆರೆಯ ಮೋಟಾರ್ ರಿಪೇರಿ, ವಿದ್ಯುತ್ ವ್ಯತ್ಯಯ, ಬೇಸಿಗೆಯಲ್ಲಿ ನೀರಿನ ಅಭಾವ ಸೇರಿದಂತೆ ವಿವಿಧ ಸಮಸ್ಯೆಯಿಂದ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯು ಪರದಾಡುವ ಸ್ಥಿತಿಯಿದೆ. ಆದ್ದರಿಂದ, ರಾಜ್ಯ ಸರ್ಕಾರ ಹೊಸದಾಗಿ ಆವರಣದಲ್ಲಿಯೇ ಕೆರೆ ನಿರ್ಮಿಸಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ದಾಹ ತಣಿಸಲು ನಿರ್ಧರಿಸಲಾಗಿತ್ತು. ಆದ್ದರಿಂದ, ನಗರ ಅಭಿವೃದ್ಧಿ ಪ್ರಾಧಿಕಾರ (ಬುಡಾ)ಕ್ಕೆ ಹತ್ತು ಕೋಟಿ ರೂ. ವೆಚ್ಚದಲ್ಲಿ ಸುಸ್ಸಜ್ಜಿತ ಕೆರೆಯ ನಿರ್ಮಾಣ ದ ಜವಾಬ್ದಾರಿ ವಹಿಸಲಾಗಿತ್ತು. ಈಗಾಗಲೇ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಕೂಡ ಸಿದ್ಧತೆ ನಡೆಸಲಾಗಿತ್ತು. ಆದರೆ, ಇತ್ತೀಚೆಗೆ ಕೆಲ ತಿಂಗಳ ಹಿಂದೆ ಬುಡಾ ಅಧ್ಯಕ್ಷರು ಭ್ರಷ್ಟಚಾರದಲ್ಲಿ ತೊಡಗಿ ವಿವಿಧಡೆ ಅಕ್ರಮ ಎಸಗಿದ್ದಾರೆ ಎಂದು ಸ್ವತಃ ಜಿಲ್ಲೆಯ ಶಾಸಕರಾದ ನಾರಾ ಭರತರೆಡ್ಡಿ, ಜೆ.ಎನ್. ಗಣೇಶ ಆರೋಪಿಸಿದ್ದರು. ಆದ್ದರಿಂದ, ರಾಜ್ಯ ಸರ್ಕಾರ ರಾಜ್ಯ ನಗರಾಭಿವೃದ್ಧಿ ನೇತೃತ್ವ ತಂಡ ರಚಿಸಿ ನಗರದ ಬುಡಾ ಕಚೇರಿಯ ಮೇಲೆ ದಾಳಿ ನಡೆಸಿ 2024 ರ ಏಪ್ರಿಲ್ ಹಾಗೂ ಜೂನ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ಸಭಾ ನಡವಳಿಗಳು ಹಾಗೂ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅಗತ್ಯ ದಾಖಲೆಗಳನ್ನು ಜಪ್ತಿಪಡಿಸಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ತನಿಖೆ ನಡೆಸಿ ಎರಡು ತಿಂಗಳು ಕಳೆಯುತ್ತಿದ್ದರೂ ಈವರೆಗೂ ವರದಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಏನೇ ಇರಲಿ ಮುಂಬರುವ ಕೆಲ ತಿಂಗಳಲ್ಲೇ ಬೇಸಿಗೆ ಕಾಲ ಬರಲಿದೆ. ವಿವಿ ವಿದ್ಯಾರ್ಥಿಗಳು ನೀರಿನ ಬಾಟಲಿಗಳನ್ನು ಹಿಡಿದುಕೊಂಡು ಆವರಣದ ವಸತಿ ನಿಲಯಗಳ ಹತ್ತ ಅಲೆದಾಡುವ ಪರಿಸ್ಥಿತಿ ಬರಲಿದೆ. ಅಲ್ಲದೆ, ಕೆಲ ವಿದ್ಯಾರ್ಥಿಗಳು ನೀರಿಗಾಗಿ ತಡರಾತ್ರಿ ವೇಳೆ ವಿವಿ ಮುಂಭಾಗದಲ್ಲಿ ಹರಿಯುವ ತುಂಗಭದ್ರಾ ಕಾಲುವೆಗೆ ಇಳಿದು ಕುಡಿಯುವುದು ತಪ್ಪುವುದಿಲ್ಲ.

ವಿವಿಗೆ ಟ್ಯಾಂಕರ್ ನೀರು ಮೊರೆ : ವಿವಿ ಆವರಣದ ಇಪ್ಪತ್ತಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ವಿವಿಧ ತಳಿಯ ಸಾವಿರಾರುನ ಸಸಿಗಳನ್ನು ಬೆಳೆಯಲಾಗಿದೆ. ಈಗಾಗಲೆ ಕಳೆದ ಕೆಲ ತಿಂಗಳಲ್ಲಿ ಸುರಿದ ಮಳೆಯಿಂದ ಉತ್ತಮವಾಗಿ ಬೆಳೆದು ವಿವಿ ಹಸಿರಿನಿಂದ ಕಂಗೊಳ್ಳಿಸುತ್ತಿದೆ. ಈವರೆಗೂ ಸಸಿಗಳಿಗೆ ನೀರಿನ ಅಭಾವ ಎದುರಾಗದೆ ಇರುವುದರಿಂದ ಉತ್ತಮವಾಗಿ ಬೆಳೆದಿವೆ. ಆದರೆ, ಮುಂಬರುವ ದಿನಗಳಲ್ಲಿ ಬೇಸಿಗೆ ಇರುವುದರಿಂದ ನೀರಿನ ಕೊರತೆಯಿಂದ ಎಲ್ಲ ಗಿಡಗಳಿಗೆ ನೀರು ಉಣಿಸಲು ಬಾಡಿಗೆ ನೀರಿನ ಟ್ಯಾಂಕರ್ ಮೂಲಕ ಮೊರೆ ಹೋಗಬೇಕಾಗುತ್ತದೆ. ಅಲ್ಲದೆ, ಆವರಣದ ಸಾವಿರಾರು ಗಿಡಗಳಿಗೆ ಅಧಿಕ ನೀರು ಅಗತ್ಯವಿರುವುದರಿಂದ ಲಕ್ಷಾಂತರ ರೂ. ಟ್ಯಾಂಕರ್ ವ್ಯಯಿಸಬೇಕಾಗುತ್ತದೆ. ಕೆರೆಯ ನಿರ್ಮಾಣವಾಗಿದ್ದರೆ ಡ್ರಿಪ್ಸ್ ಮೂಲಕ ಗಿಡಗಳಿಗೆ ನೀರು ಹರಿಸಬಹುದಾಗಿತ್ತು ಎಂಬುದು ವಿವಿ ಪ್ರಾಧ್ಯಾಪಕರ ಅಭಿಪ್ರಾಯ.

ಕೋಟ್... ವಿವಿ ಆವರಣದಲ್ಲಿ ಹೊಸದಾಗಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಲು ಬುಡಾದಿಂದ ಉದ್ದೇಶಿಸಲಾಗಿತ್ತು. ಆದರೆ, ಬುಡಾದಲ್ಲಿ ತನಿಖೆ ನಡೆಯುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸಿಲಾಗಿದೆ. ಅಲ್ಲದೆ, ನಗರದ ವಿವಿಧಡೆ ಉದೇಶಿಸಲಾಗಿದ್ದ ಹಲವು ಕಾಮಗಾರಿಗಳು ವಿಳಂಬವಾಗಲಿವೆ.

- ನಂಜೇಗೌಡ, ಉಸ್ತುವಾರಿ ಆಯುಕ್ತ, ಬುಡಾ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net