105 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

14112022 bellary central minister shobha Karandlaje Foundation Ceremony
Published on

ಬಳ್ಳಾರಿ: ನಾವು ಸಿರಿಧಾನ್ಯ ಬಳಕೆ ಬಿಟ್ಟು ಪಾಶ್ಚಿಮಾತ್ಯ ಕಡೆ ಸಾಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲೂಕಿನ ಪಿ.ಡಿ.ಹಳ್ಳಿ ಗ್ರಾಮದಲ್ಲಿ ಸೋಮವಾರ, ಕೃಷಿ ವಿಜ್ಞಾನಗಳ ವಿವಿ ರಾಯಚೂರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಗರಿ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ವಸತಿ ನಿಲಯದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದರು.

ಉತ್ತಮ ಆರೋಗ್ಯ ಹೊಂದಲು ಸಿರಿ ಧಾನ್ಯಗಳನ್ನು ಬಳಸುವಂತೆ ನಮ್ಮ ಪೂರ್ವಜರೇ ಹೇಳಿದ್ದರು. ಆದರೆ, ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಸರ್ಕಾರಗಳು ಕಾರ್ಖಾನೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಿದವು. ಇಂದು ಸಾವಿರಾರು ಕಾರ್ಖಾನೆಗಳು ಮುಚ್ಚಿಹೋಗಿವೆ. ಅಂದು ಕೃಷಿಯನ್ನು ಮರೆತು ಮುಂದೆ ಸಾಗಿದರು. ಹೀಗಾಗಿ, ಕರೊನಾ ಸಂದರ್ಭದಲ್ಲಿ ಎಲ್ಲರಿಗೂ ಕೃಷಿ ಮಾಡುವ ರೈತರು ಆರೋಗ್ಯದ ಬಗ್ಗೆ ಪಾಠ ಕಲಿಸಿದರು. ಅಂದು ಆಹಾರದ ಕೊರತೆಯಿಂದ ಬಳಲಿದೆವು. ರೈತರು ತಾವು ಬೆಳದ ಬೆಳಗಳು, ಸಿರಿಧಾನ್ಯಗಳನ್ನು ನೀಡಿದರು. ನಮ್ಮ ದೇಶಕ್ಕೆ ಮಾತ್ರವಲ್ಲದೆ ವಿದೇಶಕ್ಕೆ ಕೂಡ ಕಳುಹಿಸಿದೆವು. ಇದು ದೊಡ್ಡ ಪ್ರಯತ್ನ ಎಂದರು.

ಜಿಲ್ಲೆಗೆ ಕೃಷಿ ಕಾಲೇಜು ಮಂಜೂರು ಆಗಿರುವುದರಿಂದ ಹೊಸ ತರಗತಿಗಳನ್ನು ಶುರು ಮಾಡುವುದಕ್ಕೆ 105 ಕೋಟಿ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಇದು, ವಿದ್ಯಾರ್ಥಿಗಳಿಗೆ, ತರಬೇತಿ ರೈತರಿಗೆ ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೃಷಿ ಸಮಾನ್, ಫಸಲ್ ಭಿಮಾ ವಿಮೆಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಳ್ಳಾರಿ ಜಿಲ್ಲೆಗೆ 245 ಕೋಟಿ.ರೂ ಬೆಳೆ ಹಾನಿಗೆ ವಿಮೆ ಕೊಟ್ಟಿದ್ದಾರೆ. ಯಾವ ರೈತರಿಗೆ ಹೋರಿ, ಯಂತ್ರಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲವೋ ಅಂಥವರಿಗೆ ಪ್ರತಿ ಹೋಬಳಿಯಲ್ಲಿ ಸರ್ಕಾರದಿಂದ ಬಾಡಿಗೆ ಯಂತ್ರಗಳನ್ನು ಕೊಡುತ್ತಿದ್ದಾರೆ. ಇದು ರೈತರಿಗೆ ಉಪಯೋಗವಾಗುತ್ತಿದೆ ಎಂದರು.

2013-14 ರಲ್ಲಿ ದೇಶದ ಕೃಷಿ ಬಜೆಟ್ 23 ಲಕ್ಷ ಕೋಟಿ ರೂ. ಇತ್ತು. ಆದರೆ, ಈಗ 1.32 ಲಕ್ಷ ಕೋಟಿ ರೂ. ಇದೆ. ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಹೆಚ್ಚಳವಾಗಿದೆ. ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕೋಲ್ಡ್ ಸ್ಟೋರೆಜ್ ಮಾಡಿದೆ. ವಿವಿಗಳಿಂದ ನಡೆಯುವ ಸಂಶೋಧನಾ ರೈತರಿಗೆ ತಲುಪವಂಥ ಕೆಲಸವಾಗಬೇಕು. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತೋಟಗಾರಿಕೆ ಹಾಗೂ ಕೃಷಿ ವಿವಿ ಒಂದೇ ಸ್ಥಳದಲ್ಲಿ ಇರಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡುವೆ ಎಂದರು.

ಗ್ರಾಮೀಣ ಶಾಸಕ ಬಿ.ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಿರುವ ಯೋಜನೆಗಳು ರೈತರಿಗೆ ತಲುಪುತ್ತಿವೆ. ಆದರೆ, ಕೆಲವು ಕಡೆ ನಷ್ಟದಿಂದ ರೈತರು ಬೆಳೆಗೆ ಕೈಯಾರ ಹಣ ಹಾಕುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂಸದರಾದ ವೈ.ದೇವೆಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಕೆ.ಶಿವನಗೌಡ ನಾಯಕ, ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಪಿ.ಡಿ ಹಳ್ಳಿ ಗ್ರಾಪಂ ಅಧ್ಯಕ್ಷ ಸೋಮಲಿಂಗ, ಕೃಷಿ ವಿವಿ ಕುಲಪತಿ ಎಂ.ಹನುಮಂತಪ್ಪ, ವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಕೊಟ್ರೇಶಪ್ಪ ಬಿ.ಕೋರಿ, ತ್ರಿವಿಕ್ರಮ ಜೋಷಿ, ಮಹಾಂತೇಶ ಪಾಟೀಲ್, ಜಿ.ಶ್ರೀಧರ್ ಕೇಸರಹಟ್ಟಿ, ಸುನೀಲ್ ಕುಮಾರ್ ವರ್ಮಾ, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಕೆ ರಮೇಶ, ಆವರಣದ ಮುಖ್ಯಸ್ಥ ಜಿ.ರವಿಶಂಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ್.ತೋಟಗಾರಿಕೆ ಉಪ ನಿರ್ದೇಶಕ ಎಸ.ಪಿ.ಭೋಗಿ ಇತರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net