ಬಳ್ಳಾರಿ ; ಹೊಸ ವರ್ಷದ ಸಂಕೇತ ಯುಗಾದಿ ಹಬ್ಬದ ಸಂಭ್ರಮ ಜಿಲ್ಲಾದ್ಯಂತ ಜೋರಾಗಿದೆ. ಕಳೆದ ವರ್ಷಗಳ ಕಹಿ ಅನುಭವಗಳು ಕಳೆದು ಬೆಲ್ಲದ ಸಿಹಿಯ ರೈತರ ಬಾಳಿಗೆ ಸಿಗಲೆಂಬ ಆರೈಕೆಯೊಂದಿಗೆ ಯುಗಾದಿ ಆಚರಣೆಗೆ ಎಲ್ಲೆಡೆ ಸಿದ್ದತೆ ನಡೆದಿದ್ದು, ಇದರೊಂದಿಗೆ ಖರೀದಿ ಭರಾಟೆಯೂ ಜೋರಾಗಿದೆ.
35 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಬಿಸಿಲಿನ ಝಳದ ನಡುವೆಯೂ ಹಬ್ಬದ ಸಂಭ್ರಮ, ಸಡಗರ ಕಾಣುತ್ತಿದೆ. ಬೆಂಗಳೂರು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಒಂದೆಡೆ ಬಿಸಿಲು, ಮತ್ತೊಂದಡೆ ಬೆಲೆ ಏರಿಕೆಯ ಬಿಸಿ ಹಬ್ಬದ ಸಂಭ್ರಮದಲ್ಲಿರುವ ಜನರನ್ನು ತಟ್ಟಿದೆ.
ಯುಗಾದಿ ಹಬ್ಬ ಮುನ್ನ ದಿನವಾದ ಶನಿವಾರ ನಗರದ ಎಲ್ಲ ರಸ್ತೆಗಳು, ಅಂಗಡಿ ಮುಂಗಟ್ಟುಗಳು ಗಿಜಿಗುಟ್ಟಿವೆ. ಬೆಲೆ ಏರಿಕೆ ನಡುವೆಯೂ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬೆಂಗಳೂರು ರಸ್ತೆ, ದುರ್ಗಮ್ಮ ಗುಡಿ ವೃತ್ತ ಹಾಗೂ ಮಾರುಕಟ್ಟೆ ಪ್ರದೇಶ ಜನಜಂಗುಳಿಯಿಂದ ತುಂಬಿತ್ತು. ಹೂವು, ಹಣ್ಣು, ತರಕಾರಿಗಳ ಮಾರಾಟ ಭರಾಟೆ ಹೆಚ್ಚಿತ್ತು.
ಬೆಲೆ ದುಬಾರಿ : ಹಬ್ಬದ ನೆಪದಲ್ಲಿ ವ್ಯಾಪಾರಿಗಳು ಹೂವು, ಹಣ್ಣುಗಳಿಗೆ ದುಪ್ಪಟ್ಟು ಬೆಲೆ ನಿಗದಿ ಮಾರಾಟ ಮಾರುತ್ತಿದ್ದರು. ಒಂದು ಕೆ.ಜಿ. ಸೇಬು 200 ರೂ., ದ್ರಾಕ್ಷಿ 150 ರೂ., ದಾಳಿಂಬೆ 160 ರೂ. , ಖರಭೂಜ 60 ರೂ., ಅನಾನಸ್ 60 ರೂ., ಸಪೋಟ 100 ರೂ., ಏಲಕ್ಕಿ ಬಾಳೆ ಡಜನ್ 70 ರೂ., ಮೂಸಂಬಿ 80 ರೂ., ಒಂದು ಮಾರು ಮಲ್ಲಿಗೆ 50 ರೂ., ಕನಕಾಂಬರ 50 ರೂ., ಸೇವಂತಿ ಹೂವು 100 ರೂ. ಹಾಗೂ ಪ್ರತಿ ಗುಲಾಬಿಗೆ 20 ರೂ. ಹಾಗೂ ಸಣ್ಣ ಗುಲಾಬಿಗೆ 400 ರೂ. ಬೆಲೆ ಇತ್ತು.
ನಗರದ ವಿವಿಧಡೆ ಹಣ್ಣು, ಹೂವು ಮತ್ತು ಮಾವು - ಬೇವಿನ ಸೊಪ್ಪಿನ ಸಾಮಾನ್ಯ ಕಟ್ಟಿಗೆ 20 ರೂ. ಬೆಲೆ ನಿಗದಿಯಾಗಿತ್ತು. ನಗರ ಹಾಗೂ ಪಟ್ಟಣ ಪ್ರದೇಶದ ಜನರಿಗೆ ಎಲ್ಲವನ್ನೂ ಕೊಂಡು ತರುವ ಅನಿವಾರ‌್ಯವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಗ್ರಾಮೀಣ ಭಾಗದಿಂದ ಮಾವು ಹಾಗೂ ಬೇವಿನ ಸೊಪ್ಪು ತಂದು ಮಾರಾಟ ಮಾಡುತ್ತಿದ್ದರು. ಇಲ್ಲಿನ ಬೆಂಗಳೂರು ರಸ್ತೆಯಲ್ಲಿ ಖರೀದಿ ಹಿನ್ನೆಲೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.