ಎರಡು ಕಾವ್ಯಗಳು ಅನನ್ಯ ಕೃತಿಯಾಗಿವೆ

Published on

ಬಳ್ಳಾರಿ : ರಾಮಾಯಣ ಬೇಡ ಸಂಸ್ಕೃತಿಯ ಕೃತಿಯಾದರೆ, ಮಹಾಭಾರತ ಜಲ ಸಂಸ್ಕೃತಿಯ ಕೃತಿಯಾಗಿದೆ ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಎಸ್. ಶ್ಯಾಮಣ್ಣ ಹೇಳಿದರು.

ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಿದ್ದ ಶ್ರೀವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿಯ ಮಹಾ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ರಚಿಸಿದ ವಾಲ್ಮೀಕಿ ಮತ್ತು ವ್ಯಾಸರು ಕೆಳ ವರ್ಗದ ಸಮುದಾಯಕ್ಕೆ ಸೇರಿದವರು ಎಂದರು.

ವಾಲ್ಮೀಕಿ ಕೃಷಿ ಸಂಸ್ಕೃತಿಯ ಪ್ರತೀಕ. ಅವರ ಜಯಂತಿಯನ್ನು ಪೂರ್ಣಿಮೆಯಂದು ಆಚರಿಸುತ್ತಿರುವುದು ಜ್ಞಾನದ ವಲಯಕ್ಕೆ ಮಹತ್ವ ಕೊಟ್ಟಿದ್ದನ್ನು ಎತ್ತಿ ಹಿಡಿಯುತ್ತದೆ. ಬೇಟೆ ಸಂಸ್ಕೃತಿಯಿಂದ ಕೃಷಿ ಸಂಸ್ಕೃತಿಯ ಕಡೆ ಪರಿವರ್ತನೆಯಾದ ವಿಶಿಷ್ಟ ಇತಿಹಾಸ ವಾಲ್ಮೀಕಿಯವರದು. ಅವರು ರಚಿಸಿದ ರಾಮಾಯಣವು ಭಾರತದ ಭೌಗೋಳಿಕತೆಯ ಅಖಂಡತೆಯನ್ನು ಶತಶತಮಾನಗಳಿಂದ ಕಾಪಾಡಿಕೊಂಡು ಬಂದ ಅನನ್ಯ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕಾಲೇಜು ಪ್ರಾಂಶುಪಾಲ ಡಾ. ಜಿ.ಪ್ರಹ್ಲಾದ ಚೌದ್ರಿ ಮಾತನಾಡಿ, ರಾಮಾಯಣವು ಧರ್ಮ, ನೈತಿಕತೆ, ಆದರ್ಶಗಳನ್ನು ಕಟ್ಟಿಕೊಡುವ ಅಪರೂಪದ ಕಾವ್ಯವಾಗಿದ್ದು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net