ತುಂಗಭದ್ರಾ ಜಲಾಶಯಕ್ಕೆ ಐದು ದಿನದಲ್ಲಿ 32 ಟಿಎಂಸಿ ಅಡಿ ನೀರು; ಸೋಮವಾರ 1.16 ಲಕ್ಷ ಕ್ಯೂಸೆಕ್ ಒಳಹರಿವು

10082020 TB dam
Published on

ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ನಿತ್ಯ ದಾಖಲೆಯ ಒಳಹರಿವು ಬರುತ್ತಿದೆ. ಕಳೆದ ಐದು ದಿನಗಳಲ್ಲಿ 32 ಟಿಎಂಸಿ ಅಡಿ ನೀರು ಅಣೆಕಟ್ಟೆಗೆ ಹರಿದುಬಂದಿದೆ.

ಆ.6ರಂದು ಅಣೆಕಟ್ಟೆಯಲ್ಲಿ 40.262 ಟಿಎಂಸಿ ಅಡಿ ನೀರಿತ್ತು. ಪ್ರಸ್ತುತ ನೀರಿನ ಸಂಗ್ರಹ ಪ್ರಮಾಣ 72.439 ಟಿಎಂಸಿ ಅಡಿಗೆ ಏರಿಕೆಯಾಗಿದೆ. ಸೋಮವಾರ ಒಂದೇ ದಿನ 9.337 ಟಿಎಂಸಿ ಅಡಿ ನೀರು ಹರಿದುಬಂದಿದೆ. ಅಣೆಕಟ್ಟೆ 100.855 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಣೆಕಟ್ಟೆ ಭರ್ತಿಗೆ 28.416 ಟಿಎಂಸಿ ಅಡಿ ಬಾಕಿ ಇದೆ. ಸೋಮವಾರ 1.16 ಲಕ್ಷ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರಿದರೆ ಒಂದೆರಡು ದಿನಗಳಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆಗಳಿವೆ.

ಕಳೆದ ವರ್ಷ ಈ ಸಂದರ್ಭದಲ್ಲಿ ಅಣೆಕಟ್ಟೆಗೆ 1.84 ಲಕ್ಷ ಕ್ಯೂಸೆಕ್ ಒಳಹರಿವಿದ್ದು 76.377 ಟಿಎಂಸಿ ಅಡಿ ನೀರಿನ ಸಂಗ್ರಹ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಒಳಹರಿವು ಹಾಗೂ ಸಂಗ್ರಹ ಪ್ರಮಾಣ ಕಡಿಮೆ ಇದೆ.

ಕರೊನಾ ಹಿನ್ನೆಲೆಯಲ್ಲಿ ಮಾ.16ರಿಂದ ಜಲಾಶಯ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಆ.15ರಂದು ಕೂಡ ಅಣೆಕಟ್ಟೆ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನದಂದು ಜಲಾಶಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net