ಬಳ್ಳಾರಿ : ಕ್ಷಯರೋಗದ ಲಕ್ಷಣ ಕಂಡುಬಂದಲ್ಲಿ ಭಯಭೀತರಾಗದೇ ಪ್ರಾಥಮಿಕ ಹಂತದಲ್ಲೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ-100 ದಿನಗಳ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯರು ಆರೋಗ್ಯವೇ ಮಹಾಭಾಗ್ಯ ಎಂದಿದ್ದಾರೆ. ಮೊದಲೆಲ್ಲ ಕ್ಷಯರೋಗ ಎಂದರೆ ಜನ ಸಾಮಾನ್ಯರಲ್ಲಿ ಆತಂಕ ಮೂಡುತಿತ್ತು. ಪ್ರಸ್ತುತ ದಿನಮಾನಗಳ ಕ್ಷಯರೋಗಕ್ಕೂ ಸೂಕ್ತ ಚಿಕಿತ್ಸೆ ಇದ್ದು, ಸಕಾಲದಲ್ಲಿ ಔಷದೋಪಚಾರ ಪಡೆದುಕೊಂಡು ಆರೋಗ್ಯವಂತರಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಧೀಶ ರಾಜೇಶ್.ಎನ್ ಹೊಸಮನೆ ಮಾತನಾಡಿ, ಕ್ಷಯರೋಗವು ಸಾಂಕ್ರಾಮಿಕ ರೋಗವಾಗಿದೆ. ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯೊಡನೆ ಪ್ರತಿಯೊಬ್ಬರೂ ಪಣತೊಡಬೇಕಿದೆ ಎಂದರು.
ತಂತ್ರಜ್ಞಾನ ಅಭಿವೃದ್ಧಿಗೊಂಡು ಆರೋಗ್ಯ ಕ್ಷೇತ್ರದಲ್ಲೂ ಆವರಿಸಿಕೊಂಡಿದೆ. ಮೊಬೈಲ್ ಎಕ್ಸ್-ರೇ ಸೇರಿದಂತೆ ಇತರೆ ಕಾರ್ಯತಂತ್ರಗಳ ಸದುಪಯೋಗ ಪಡೆದುಕೊಂಡು, ಸಮಯಕ್ಕನುಗುಣವಾಗಿ ಸುಸ್ಥಿರ ಆರೊಗ್ಯ ಹೊಂದಿಕೊಳ್ಳಬಹುದು ಎಂದು ಹೇಳಿದರು.
ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಈ ದಿನ ದೇಶದ್ಯಾದಂತ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯನ್ನು 300 ಜಿಲ್ಲೆಗಳಲ್ಲಿ 100 ದಿನಗಳ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕ್ಷಯಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬ ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣ ಜಾಸ್ತಿ ಇದ್ದು, ನಿಯಂತ್ರಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಖಾಸಗಿ ಸಂಸ್ತೆಯ ಸಹಭಾಗಿತ್ವದಲ್ಲಿ ಹಲವಾರು ಕಾರ್ಯಕ್ರಮ ನಡೆಯುತ್ತಾಲಿದ್ದು, ಮುಂಬರುವ ದಿನಗಳಲ್ಲಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರು ಕೈಜೋಡಿಸಬೇಕು ಎಂದರು.
ಇದೇ ವೇಳೆ ಜಿಲ್ಲೆಯ 08 ಕ್ಷಯಮುಕ್ತ ಗ್ರಾಮ ಪಂಚಾಯತ್‌ಗಳಿಗೆ ಸನ್ಮಾನಿಸಿದ ಬಳಿಕ ನಿಕ್ಷಯ ಮಿತ್ರ ಯೋಜನೆಯಡಿ ರೋಗಿಗಳಿಗೆ ಪೌಷ್ಠಿಕ ಆಹಾರ ಒದಗಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.
ನಿಕ್ಷಯ್ ವಾಹನಕ್ಕೆ ಗಣ್ಯರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ-100 ದಿನಗಳ ಅಭಿಯಾನ ಎನ್ನುವ ಸೆಲ್ಫಿ ಬೂತ್ ತೆರೆದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.