ವಸತಿ ನಿರ್ಮಾಣಕ್ಕೆ ಮರಗಳ ಮಾರಣಹೋಮ

Published on

ಬಳ್ಳಾರಿ : ಎನ್‌ಎಂಡಿಸಿ ಕಂಪನಿಯಿಂದ ವಸತಿ ನಿರ್ಮಾಣಕ್ಕಾಗಿ 828 ಮರಗಳನ್ನು ಕಡಿಯುವದನ್ನು ತಡೆಯುವಂತೆ ಒತ್ತಾಯಿಸಿ, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ.ಶಿವಕುಮಾರ ಅವರು ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.

ಸಂಡೂರು ತಾಲೂಕಿನ ನರಸಿಂಗಪುರ ಗ್ರಾಪಂ ದಿಂದ ಪರವಾನಗಿ ಪಡೆಯದೆ 1630 ನೌಕರರ ವಸತಿಗೃಹ ನಿರ್ಮಿಸಲಾಗಿದ್ದು, ಈವರೆಗೆ ಪಂಚಾಯಿತಿಗೆ ತೆರಿಗೆ ಪಾವತಿಸಿಲ್ಲ. ಅಲ್ಲದೆ, 332 ವಸತಿ ಗೃಹಗಳನ್ನು ವಾಡಾದಿಂದ ಅನುಮೋದನೆ ಪಡೆಯದೆ ಅನಧಿಕೃತವಾಗಿ ನೆಲಸಮಗೊಳಿಸಲಾಗಿದೆ. ಈಗಾಗಲೇ ವಾಡದಿಂದ ಅನುಮತಿ ಪಡೆದು ನಿರ್ಮಿಸಿಕೊಂಡಿರುವ ಲೇಔಟ್‌ಗಳು ಷರತ್ತುಗಳು ಪಾಲಿಸುತ್ತಿಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಾಣಗೊಂಡಿರುವ ಸಾರ್ವಜನಿಕ ಸಮುದಾಯದ ಭವನಗಳು ಕೇವಲ ಕಂಪನಿಯ ಸಿಬ್ಬಂದಿಗೆ ಮಾತ್ರ ಸದುಪಯೋಗಗೊಳ್ಳುತ್ತಿವೆ. ಪ್ರಸ್ತುತವಾಗಿ ವಸತಿ ನಿರ್ಮಾಣಕ್ಕಾಗಿ ಸಾವಿರಾರು ಮರಗಳು ಕಡಿದು ಕಟ್ಟಡ ನಿರ್ಮಿಸಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ. ಟೌನ್‌ಶಿಪ್‌ನಲ್ಲಿರುವ ವಸತಿ ಗೃಹಗಳ ತ್ಯಾಜ್ಯ ನೀರು ಸಂಸ್ಕ್ರರಣೆಗೊಳಿಸದೆ ಹರಿಸುವುದಿಂದ ದುರ್ವಾಸನೆ ಬರುತ್ತಿದೆ. ಪ್ರಸ್ತುತ ವಸತಿ ಗೃಹ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿರುವುದರಿಂದ ವನ್ಯಜೀವಿಗಳ ಸಂಕುಲಕ್ಕೆ ತೊಂದರೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net