ಬಳ್ಳಾರಿ : ಸಾರಿಗೆ ನಿಗಮಗಳ ವೇತನ ಪರಿಷ್ಕರಣೆಗೆ ಒತ್ತಾಯಿಸಿ, ರಾಜ್ಯದ ನಾಲ್ಕು ನಿಗಮಗಳಿಂದ ಆ.5ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಯ ಜಂಟಿ ಕ್ರಿಯಾ ಸಮಿತಿ ಉಪಾಧ್ಯಕ್ಷ ಆದಿಮೂರ್ತಿ ಹೇಳಿದರು.
ನಗರದ ಪತ್ರಿಕಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ 38 ತಿಂಗಳ ಹಿಂದಿನ ಬಾಕಿಯನ್ನು ನೌಕರಿಗೆ ಬಿಡುಗಡೆಗೊಳಿಸಲು ಹಿಂದೇಟು ಹಾಕುತ್ತಿದೆ. ಈಗಾಗಲೇ, ನಿಗಮಗಳ ಅಧ್ಯಕ್ಷರು ಸಿಎಂ ಜತೆ ಎರಡು ಸಭೆ ನಡೆಸಿದರೂ ಬೇಡಿಕೆ ಈಡೇರಿಕೆಗೆ ಸ್ಪಂದನೆ ದೊರೆತಿಲ್ಲ. ಶಕ್ತಿ ಯೋಜನೆ ಮೂಲಕ ರಾಜ್ಯಾದ್ಯಾಂತ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರು ನೌಕರರ ವೇತನ ಹೆಚ್ಚಿಸಲು ಮೀನಾಮೇಷ ಏಕೆ ತೋರುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನೌಕರರ ಬೇಡಿಕೆ ಈಡೇರಿವವರೆಗೆ ರಾಜ್ಯದ ನಾಲ್ಕು ನಿಗಮಗಳಿಂದ ಯಾವುದೇ ಸರ್ಕಾರಿ ಬಸ್‌ಗಳು ಸಂಚರಿಸುವುದಿಲ್ಲ. ಆದ್ದರಿಂದ, ಮಹಿಳೆಯರು, ಹಿರಿಯರು ಮನೆಯಲ್ಲಿಯೇ ಉಳಿಯಬೇಕು. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಮುಷ್ಕರಕ್ಕೆ ಎಐಟಿಯುಸಿ, ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಸಿಐಟಿಯು, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡ ನೌಕರರ, ಅಧಿಕಾರಿಗಳು , ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘಟನೆಗಳು ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು. ಮುಖಂಡರಾದ ಚೆನ್ನಪ್ಪ, ಬಸವರಾಜ, ಶಿವಪ್ಪ, ಹನುಮಂತಪ್ಪ, ಗಾದಿಲಿಂಗಪ್ಪ, ಶಿವಕುಮಾರ ಇದ್ದರು.