ಬಳ್ಳಾರಿ : ಬೆಂಗಳೂರಿನಿಂದ ಸಿರಗುಪ್ಪಗೆ ಚಲಿಸುತ್ತಿದ್ದ ಸಾರಿಗೆ ಬಸ್ ತಾಲೂಕಿನ ಹಲಕುಂದಿ ಬೈಪಾಸ್ ಬಳಿ ಪಲ್ಟಿಯಾಗಿರುವ ಘಟನೆ ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಬಳ್ಳಾರಿ ಮಾರ್ಗವಾಗಿ ಸಿರಗುಪ್ಪಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಹಿಂದಿನಿಂದ ಬಂದ ಲಾರಿಯೊಂದು ಓವರ್‌ಟೇಕ್ ಮಾಡಲು ಹೋಗಿ ಅತಿವೇಗವಾಗಿ ಸಂಚರಿಸಿದೆ. ಈ ವೇಳೆ ಬಸ್ ಚಾಲಕನ ನಿಯಂತ್ರಣ ತಪ್ಪಿದ್ದು, ಇದರಿಂದ ಪಕ್ಕದ ರೈಲ್ವೆಹಳಿಯತ್ತ ಬಸ್ ಉರುಳಿ ಬಿದ್ದಿದೆ. ಬಸ್‌ನಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರಾದರೂ, ಮೂವರಿಗೆ ಮಾತ್ರ ಸ್ವಲ್ಪ ಗಾಯಗಳಾಗಿದ್ದು, ಉಳಿದವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಅದೃಷ್ಟವಶಾತ್ ಬಸ್ ನಿಧಾನವಾಗಿ ಚಲಿಸುತ್ತಿದ್ದ ಪರಿಣಾಮ ಆಯ ತಪ್ಪಿ ಒಂದೇ ಕಡೆ ವಾಲಿ ರಸ್ತೆ ಬದಿಗೆ ಉರುಳಿಕೊಂಡಿದೆ. ಇದರಿಂದ ಹೆಚ್ಚಿನ ಅವಘಡವೂ ತಪ್ಪಿದಂತಾಗಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಹಲಕುಂದಿ ಗ್ರಾಮದ ಜನರೇ ಬಂದು ಕಿಟಕಿಯ ಗ್ಲಾಸ್ ಒಡೆದು ಬಸ್ ಒಳಗಿದ್ದ ಜನರನ್ನು ಹೊರಗೆ ಎಳೆದು ರಕ್ಷಿಸಿದ್ದಾರೆ. ಸ್ಥಳಕ್ಕೆ ಬಳ್ಳಾರಿ ಸಂಚಾರಿ ಮತ್ತು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.