ಕಂದಾಯ ಗ್ರಾಮಗಳಾಗಿ ಪರಿವರ್ತನೆ

Published on

ಬಳ್ಳಾರಿ : ರಾಜ್ಯದಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಹಲವು ವರ್ಷಗಳ ಹಿಂದಯೇ ತಾಂಡಾ, ಹಟ್ಟಿ ಸೇರಿದಂತೆ ವಿವಿಧ ಪ್ರದೇಶಗಳು ಗ್ರಾಮಗಳಾಗಿ ಪರಿವರ್ತನೆಯಾಗಿವೆ. ಆದರೆ, ಗ್ರಾಮದ ಸ್ಥಾನಮಾನ ಹಾಗೂ ವಾಸ ಮಾಡುತ್ತಿರುವ ಮನೆಗಳಿಗೆ ಹಕ್ಕು ಪತ್ರಗಳು ಇಲ್ಲದೆ ಇರುವುದರಿಂದ ಸರ್ಕಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಜನರ ಅನುಕೂಲಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಪ್ರತ್ಯೇಕವಾಗಿ ಕಾನೂನು ರೂಪಿಸಿ 36 ಸಾವಿರ ಹಕ್ಕು ಪತ್ರಗಳನ್ನು ವಿತರಿಸಲು ತಯಾರು ಮಾಡಲಾಗಿತ್ತು ಎಂದರು.

ಕಳೆದ ಬಿಜೆಪಿ ಸರ್ಕಾರದಲ್ಲಿ ಕೇವಲ 70 ಸಾವಿರ ಹಕ್ಕು ಪತ್ರ ವಿತರಣೆಯಾಗಿವೆ. ಸದ್ಯ ಈಗಿನ ಸರ್ಕಾರದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರವನ್ನು ವಿತರಿಸಲು ಮುಂದಾಗಿದೆ. ಈ ಹಕ್ಕು ಪತ್ರಗಳನ್ನು ಈ ತಿಂಗಳು 20ನೇ ತಾರೀಖು ವಿತರಿಸುವುದರ ಮೂಲಕ ನೆಮ್ಮದಿ ಹಾಗೂ ವಾಸ ಮಾಡುವ ಸೂರಿಗೆ ಗ್ಯಾರಂಟಿ ನೀಡಬೇಕು ಎಂಬುದು ಸರ್ಕಾರ ಉದ್ದೇಶವಾಗಿದೆ ಎಂದರು.

ಕಳೆದ ನಾಲವತ್ತು ವರ್ಷಗಳ ಹಿಂದೆ ಸರ್ಕಾರಿ ಜಮೀನುಗಳು ರೈತರಿಗೆ ಮಂಜೂರು ಆಗಿದ್ದು, ಅಂತಹ ಲಕ್ಷಾಂತರ ಪ್ರಕರಣಗಳು ರಾಜ್ಯದಲ್ಲಿ ಪೋಡಿಯಾಗದೆ ಬಂದಿವೆ. ಕಳೆದ ಐದು ವರ್ಷದಲ್ಲಿ ಹೋಲಿಕೆ ಮಾಡಿ ಗಮನಿಸದ ವೇಳೆ ಕೇವಲ ಐದು ಸಾವಿರ ರೈತರದು ಮಾತ್ರ ಪೋಡಿಯಾಗಿದೆ. ಇದನ್ನು ಕೂಡ ಅಭಿಯಾನವಾಗಿ ತೆಗೆದುಕೊಳ್ಳಲಾಗಿದೆ. ಕಳೆದು ಐದು ತಿಂಗಳಿಂದ ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದ್ದು ಈಗಾಗಲೇ ಸುಮಾರು ಮೂವತ್ತು ಸಾವಿರ ಮಂಜೂರಿದಾರರ ರೈತರ ಜಮೀನುಗಳನ್ನು ಸರ್ವೆ ಮಾಡಲಾಗಿದೆ. ಇನ್ನೂ ಬಾಕಿ ಇರುವಂತ ಜಮೀನುಗಳ ಮುಂದಿನ ವರ್ಷ ಸರ್ವೆ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ ಇಲಾಖೆಯಲ್ಲಿ ದಾಖಲೆಗಳ ಕಳವು, ಶಿಥೀಲಾ ಹಾಗೂ ಪುಡಿ ಪುಡಿಯಾಗುತ್ತಿದ್ದೇವೆ. ಆದ್ದರಿಂದ, ಎಲ್ಲ ಹಳೆ ದಾಖಲೆಗಳನ್ನು ಗಣಕೀಕರಣ ಮಾಡುವ ಪ್ರಕ್ರಿಯೆನ್ನು ಆರಂಭಿಸಿದ್ದು ಈಗಾಗಲೇ 20 ಕೋಟಿ ಪುಟಗಳ ಗಣೀಕಿಕರಣ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ 52 ಲಕ್ಷ ಹಾಗೂ ಜಿಲ್ಲೆಯಲ್ಲಿ ಎಪ್ಪತ್ತು ಸಾವಿರ ಜಮೀನುಗಳು ಮೃತ ಹೊಂದಿರುವವರ ಹೆಸರಿನಲ್ಲಿ ಮುಂದುವರೆದಿವೆ. ಕಾಲಕಾಲಕ್ಕೆ ದಾಖಲೆಗಳು ಆಪ್‌ಡೇಟ್ ಆಗದೆ ಇದ್ದರೆ ವಾರಾಸುದಾರರಿಗೆ ವಿವಿಧ ತೊಂದರೆಗಳು ಆಗಲಿವೆ. ಪೌತಿ ಆಗದೆ ಉಳಿದಿರುವ ಜಮೀನುಗಳನ್ನು ಪೌತಿ ಮಾಡುವುದಕ್ಕೆ ಅಭಿಯಾನ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಪ್ರಗತಿ ಹೊಂದುತ್ತಿದ್ದು, ಅದರ ಜತೆಗೆ ಬ್ಯಾಲೆನ್ಸ್ ಇರುವಂತ ಕೆಲಸ ಮಾಡಬೇಕು ಎಂಬುದಾಗಿ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net