ಉಪ ಚುನಾವಣೆಗೆ ಪಕ್ಷಗಳಲ್ಲಿ ಟಿಕೆಟ್ ಗೊಂದಲ

Published on

ಬಳ್ಳಾರಿ : ಸಂಡೂರು ಕ್ಷೇತ್ರದ ಉಪ ಚುನಾವಣೆ ದಿನೇ ದಿನೇ ಕಾವು ಹೇರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಅಕಾಂಕ್ಷಿಗಳು ದಂಡು ಹೆಚ್ಚುತ್ತಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ವರಿಷ್ಠರಿಗೆ ದೊಡ್ಡ ಚಿಂತೆಯಾಗಿದೆ.

ಉಪ ಚುನಾವಣೆ ನಾಮಪತ್ರ ಸಲ್ಲಿಕೆಗೆ ದಿನಗಳು ಸಮೀಪಿಸುತ್ತಿದ್ದು, ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಗೆಲ್ಲಬಹುದು ಎಂದು ರಾಜ್ಯ ನಾಯಕರು ತಾಳೆ ಹಾಕುತ್ತಿದ್ದಾರೆ. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಸಂಡೂರು ಎಸ್ಟಿ ಮೀಸಲು ಕ್ಷೇತ್ರವಾಯಿತು. ಸಚಿವ ಸಂತೋಷ ಲಾಡ್ ಅಪ್ತರೆಂದು ಎನಿಸಿಕೊಂಡಿದ್ದ ಈ. ತುಕಾರಾಮ್‌ಗೆ ಟಿಕೆಟ್ ನೀಡಿ ಮೊದಲ ಬಾರಿಗೆ ಗೆಲ್ಲಿಸಿದರು. 2008ರಿಂದ 2023 ರವರೆಗೆ ಕಾಂಗ್ರೆಸ್‌ಗೆ ತುಕಾರಾಮ್ ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಹಲವು ನಾಯಕರು ಹಿಂದೇಟು ಹಾಕಿದರು. ಬಳಿಕ, ಲಾಡ್ ಮಧ್ಯಸ್ಥಿಕೆ ವಹಿಸಿ ತುಕಾರಾಮ್ ಅಭ್ಯರ್ಥಿಯಾಗಿ ಘೋಷಿಸಿ ಗೆಲ್ಲಿಸಿದರು. ಉಪ ಚುನಾವಣೆಗೆ ಕಾಂಗ್ರೆಸ್‌ದಿಂದ ಈ. ತುಕಾರಾಮ್ ಪತ್ನಿ ಅನ್ನಪೂರ್ಣ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಆದರೆ, ಈಗ ಹಳೆಯ ವಾತವರಣ ಕ್ಷೇತ್ರದಲ್ಲಿ ಇಲ್ಲ. ಕಳೆದ ನಾಲ್ಕು ಬಾರಿ ತುಕಾರಾಮ್ ಗೆಲುವಿಗೆ ಶ್ರಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರೆ ಕುಟುಂಬ ರಾಜಕಾರಣ ಬೇಡ ಬೇರೆ ಅಭ್ಯರ್ಥಿಗೆ ಮನ್ನಣೆ ಹಾಕಿ ಎಂದು ಸಂತೋಷ್ ಲಾಡ್, ಸಿಎಂ ಬಳಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ, ವರಿಷ್ಠರು ಸ್ಥಳಿಯ ಕಾಂಗ್ರೆಸ್ ನಾಯಕರ ವಿರೋಧ ನಡುವೆ ಟಿಕೆಟ್ ಘೋಷಿಸಿದರೆ ಪಕ್ಷಕ್ಕೆ ಒಡೆತ ಬೀಳಲಿದೆ. ಅಲ್ಲದೆ, ಹದಿನಾಲ್ಕು ಬಾರಿ ಕಾಂಗ್ರೆಸ್ ಗೆದ್ದ ಕ್ಷೇತ್ರ ಬಿಜೆಪಿ ಕೈ ಸೇರಲಿದೆ ಎಂಬ ಭಯ ವರಿಷ್ಠರಿಗೆ ಕಾಡುತ್ತಿದೆ.

ಘೋರ್ಪಡೆ, ರೆಡ್ಡಿ ಬೆಂಬಲಿಗರಿಗೆ ಟಿಕೆಟ್? : ಸಂಡೂರಿನಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಎಂ.ವೈ.ಘೋರ್ಪಡೆ ಪುತ್ರ ಕಾರ್ತಿಕೇಯ ಘೋರ್ಪಡೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ತ್ಯಜಿಸಿ ಕೇಂದ್ರ ಗೃಹಮಂತ್ರಿ ಅಮಿತಾ ಷಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ಕೆ. ಘೋರ್ಪಡೆ ಮಾತಿನಂತೆ 2018ರಲ್ಲಿ ಸಿ. ರಾಘವೇಂದ್ರ ಹಾಗೂ 2023 ರಲ್ಲಿ ಶಿಲ್ಪಾ ರಾಘವೇಂದ್ರ ಬೆಂಬಲಿಗರಿಗೆ ಟಿಕೆಟ್ ನೀಡಿದರು. ಆದರೆ, 2018ರಲ್ಲಿ ರಾಘವೇಂದ್ರ ಹೀನಾಯವಾಗಿ ಸೋತರು. 2023ರಲ್ಲಿ ಅನುಕಂಪ ಆಧಾರಿತ ಟಿಕೆಟ್ ಗಿಟ್ಟಿಸಿಕೊಳ್ಳಲು ರಾಘವೇಂದ್ರ ಪತ್ನಿ ಶಿಲ್ಪಾಗೆ ಮನ್ನಣೆ ಹಾಕಲಾಯಿತು. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಕೆ. ಎಸ್. ದಿವಾಕರ್ ಟಿಕೆಟ್ ತಪ್ಪಿದ್ದರಿಂದ ಬಂಡಾಯವೆದ್ದು ಕೆಆರ್‌ಪಿಪಿಯಿಂದ ಸ್ಪರ್ಧೆ ಮಾಡಿದರು. ಬಿಜೆಪಿಯ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸುಲಭವಾಯಿತು. ಸದ್ಯ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಬಿಜೆಪಿ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಕ್ಷೇತ್ರದಲ್ಲಿ ಮನೆ ಮಾಡಿದ್ದಾರೆ. ಸದ್ಯ ಬೆಂಬಲಿತ ಕೆ. ಎಸ್. ದಿವಾಕರ್‌ಗೆ ಟಿಕೆಟ್ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಕಳೆದ ಬಾರಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ದಿವಾಕರ್‌ಗೆ ಮನ್ನಣೆ ಹಾಕದೆ ಘೋರ್ಪಡೆ ಬೆಂಬಲಿತರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆ ಬಿಜೆಪಿ ಸ್ಥಳೀಯ ನಾಯಕರಲ್ಲಿ ಜೋರಾಗಿ ನಡೆಯುತ್ತಿದೆ. ಬಿಜೆಪಿ ವರಿಷ್ಠರು ಯಾರ ಬೆಂಬಲಿತ ಒಬ್ಬರಿಗೆ ಟಿಕೆಟ್ ಘೋಷಿಸಿದರು, ಒಬ್ಬರು ಅಸಮಾಧಾನಗೊಳ್ಳುವುದು ಮಾತ್ರ ಖಂಡಿತ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಹೊರತು ಬೇರೆ ಏನಿಲ್ಲ. ಆದ್ದರಿಂದ, ಇಬ್ಬರ ನಾಯಕರ ಒಪ್ಪಿಗೆಯ ಅಭ್ಯರ್ಥಿಯನ್ನು ಘೋಷಿಸಿದರೆ ಬಿಜೆಪಿಗೆ ಅನುಕೂಲವಾಗಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net