ಚಿಂತನೆಗಳು ಎಲ್ಲ ಕಾಲಕ್ಕೂ ಮಾದರಿ

Published on

ಬಳ್ಳಾರಿ : ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಆದರ್ಶ, ಚಿಂತನೆಗಳು ಎಲ್ಲ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ.ಬಾಬು ಜಗಜೀವನ್ ರಾಮ್ 118 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೋಷಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಮಹಾನ್ ನಾಯಕ ಡಾ. ಬಾಬುಜಗಜೀವನರಾಮ್ ಅವರು ಶೋಷಿತರ ಆಶಾಕಿರಣರಾಗಿದ್ದಾರೆ ಎಂದರು.

ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಬಾಬು ಜಗಜೀವನ್ ರಾಮ್ ಅವರ ಜನ್ಮ ವಾರ್ಷಿಕೋತ್ಸವವನ್ನು ಏ. 5 ರಂದು ಪ್ರತಿವರ್ಷ ಆಚರಿಸುತ್ತೇವೆೆ. ಪರಿಶಿಷ್ಟ ಜಾತಿಗಳಂತಹ ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಗಮನಾರ್ಹ ಭಾರತೀಯ ಕಾರ್ಯಕರ್ತ ಮತ್ತು ರಾಜಕಾರಣಿಯಾಗಿದ್ದರು ಎಂದರು.

ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ರಾಷ್ಟದ ಬೆನ್ನೆಲುಬು ರೈತ ಹಾಗೂ ಯೋಧ ಈ ಎರಡೂ ಸಮುದಾಯಕ್ಕೆ ಡಾ.ಬಾಬು ಜಗಜೀವನ ರಾಮ್ ಅವರ ಮಾರ್ಗದರ್ಶನ ಹಾಗೂ ನಾಯಕತ್ವ ಉಲ್ಲೇಖನಾರ್ಹವಾಗಿದೆ. ಅವರ ಸಾಮಾಜಿಕ ಕಳ-ಕಳಿ ಹಾಗೂ ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಚಿಂತಕ ಬಿ.ಶ್ರೀನಿವಾಸ ಮೂರ್ತಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಚಿಗುರು ಕಲಾತಂಡದಿಂದ ಡಾ.ಬಾಬು ಜಗಜೀವನ್ ರಾಮ್ ಕುರಿತ ಗೀತೆಗಳನ್ನು ಪ್ರಸ್ತುತ ಪಡಿಸಿದರು ಮತ್ತು ಕರ್ನಾಟಕ ರಾಜ್ಯ ಡಾ.ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆ ವತಿಯಿಂದ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರು ಫಲಾನುಭವಿಗಳಿಗೆ ಆಧುನಿಕ ಚರ್ಮಕಾರರ ಪಾದುಕೆ ಕುಟಿರಗಳನ್ನು ವಿತರಿಸಲಾಯಿತು.

ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ವಿವಿಧ ಸಾಂಸ್ಕೃತಿ ಕಲಾ ತಂಡಗಳನ್ನೊಳಗೊಂಡು ನಗರದಲ್ಲಿ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಸಾರಿಗೆ ಇಲಾಖೆ ವತಿಯಿಂದ ರೂಪಿಸಿದ್ದ ವಿಧಾನಸೌಧ ಸ್ತಬ್ಧಚಿತ್ರ, ಕೃಷಿ , ತೋಟಗಾರಿಕೆ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಿವಿಧ ಇಲಾಖೆಗಳ ವತಿಯಿಂದ ವಿವಿಧ ಸರ್ಕಾರದ ಕಾರ್ಯಕ್ರಮಗಳು ಮತ್ತು ವಿವಿಧ ಯೋಜನೆಗಳ ಮಾಹಿತಿ ಕುರಿತ ಸ್ತಬ್ಧಚಿತ್ರಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net