ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು

Published on

ಬಳ್ಳಾರಿ ; ಮಾಜಿ ಸಿಎಂ ಡಿ.ದೇವರಾಜು ಅರಸು ಅವರು ಜೀತ ಹಾಗೂ ಮಲಹೊರುವ ಪದ್ಧತಿ ನಿರ್ಮೂಲನೆಯಿಂದ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು. ಸಮಾಜಮುಖಿ ಕಾರ್ಯಗಳತ್ತ ಮನಸು ಸದಾ ತುಡಿಯುತ್ತಿತ್ತು ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವರಾಜು ಅರಸು ಅವರು ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಟ್ಟರು. ದಕ್ಷ ಆಡಳಿತಗಾರ ಆಗಿದ್ದ ಅವರು ಎಲ್.ಜಿ.ಹಾವನೂರು ವರದಿ ಜಾರಿಗೊಳಿಸಿ ಸಣ್ಣ, ಶೋಷಿತ ಸಮುದಾಯಕ್ಕೆ ನೆರವಾದರು ಎಂದರು.

ರಾಜ್ಯದಲ್ಲಿ ಭೂಒಡೆತನ, ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಸಾಮಾಜಿಕ ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದರು. ರಾಜ್ಯದ ಅಪರೂಪದ ರಾಜಕಾರಣಿ. ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು ಎಂದರು.

ಇಂದಿನ ಯುವ ಪೀಳಿಗೆಯು ಮೊಬೈಲ್ ಗೀಳಿಗೆ ಬೀಳಬಾರದು. ಅದರಿಂದ ಒಳ್ಳೆಯ ವಿಚಾರಗಳನ್ನು ಮಾತ್ರ ಆಸ್ವಾದಿಸಬೇಕು. ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಒಬ್ಬ ಮನುಷ್ಯ ದೇವರಾಗಲು ಸಾಧ್ಯವಿಲ್ಲ. ಅಂದಿನ ಸಮಯದಲ್ಲಿ ದೇವರಾಜು ಅರಸರನ್ನು ಬಡವರು, ದಲಿತರು, ಹಿಂದುಳಿದ ವರ್ಗದವರ ದೇವರೆಂದೇ ಭಾವಿಸಿದ್ದರು. ಯಾರೇ ಆದರೂ ಅಧಿಕಾರವನ್ನು ಒಳ್ಳೆಯ ಕೆಲಸಗಳಿಗಾಗಿಯೇ ವಿನಿಯೋಗಿಸದಾಗ ಮಾತ್ರ ಸಾರ್ಥಕವಾಗುತ್ತದೆ ಎಂದರು.

ಹಂಪಿ ವಿದ್ಯಾರಣ್ಯ ಕನ್ನಡ ವಿವಿ ಪ್ರೊ.ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಹಣ ಮತ್ತು ಅಧಿಕಾರ ಒಂದೇ ಕಡೆ ಇರಬಾರದು, ಇದ್ದರೆ ಅಲ್ಲಿ ಪ್ರಜಾಪ್ರಭುತ್ವ ಸತ್ತಂತೆ ಎಂದು ಅಭಿಪ್ರಾಯಪಟ್ಟವರು ಡಿ.ದೇವರಾಜು ಅರಸರು. ಅವರು ಜಾರಿಗೆ ತಂದ ಹಲವಾರು ಕಾಯ್ದೆ-ಕಾನೂನುಗಳು, ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಂದಿನ ಅಧಿಕಾರಿ ವರ್ಗವು ಪ್ರಮುಖ ಪಾತ್ರ ವಹಿಸಿತ್ತು ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ನಂತರ ಸದ್ಭಾವನಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅತಿಹೆಚ್ಚು ಅಂಕ ಪಡೆದ, ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net