ಬಳ್ಳಾರಿ : ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ನಿಲುಗಡೆಗೆ ಸ್ಥಳಾವಕಾಶ ಸಿಗದೆ ಪರದಾಡುವಂತಾಗಿದೆ. ಜನಸಂದಣಿ ಇರುವ ಪ್ರಮುಖ ರಸ್ತೆ ಸೇರಿದಂತೆ ಸಿಕ್ಕ ಜಾಗಗಳಲ್ಲಿ ನಿಲುಗಡೆ ಮಾಡುತ್ತಿದ್ದು ಸುಗಮ ಸಂಚಾರ ಬಲು ಕಷ್ಟಕರವಾಗುತ್ತಿದೆ.
ಪ್ರತಿ ದಿನ ನೂರಾರು ಜನ ಸೇರುವ ಪ್ರಮುಖ ವ್ಯಾಪಾರ ಕೇಂದ್ರ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಲಾಗುತ್ತಿದೆ. ಬೆಂಗಳೂರು ರಸ್ತೆ, ಇನ್‌ಫ್ಯಾಂಟ್ರಿ ರಸ್ತೆ, ದುರ್ಗಮ್ಮ ರಸ್ತೆ, ರೈಲು ನಿಲ್ದಾಣ ರಸ್ತೆ, ಮೋತಿ ರಸ್ತೆ, ಸಿರಗುಪ್ಪ ರಸ್ತೆ ಒಳಗೊಂಡಂತೆ ಎಲ್ಲ ರಸ್ತೆಗಳಲ್ಲಿ ಬೈಕ್ ಹಾಗೂ ಕಾರ್‌ಗಳು ನಿಂತಿರುತ್ತವೆ. ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ನಗರದಿಂದ ಹೊಸಪೇಟೆ, ಸಿರಗುಪ್ಪ , ವಿವಿಧ ತಾಲೂಕು ಸೇರಿದಂತೆ ಇತರೆಡೆಗೆ ಹೋಗುವವರು ಆ ರಸ್ತೆಗಳ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಮುಖ್ಯ ಪ್ರಮುಖ ಕಾರಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲು ಕಂಡು ಬರುತ್ತದೆ.
ವಾಹನ ಸವಾರರು ಸಿಕ್ಕ- ಸಿಕ್ಕಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದು ಕಳ್ಳರ ಪಾಲಿಗೆ ವರವಾಗಿ ಪರಿಣಮಿಸಿದೆ. ಹಗಲು ಹೊತ್ತಿನಲ್ಲೇ ಬೈಕ್ ಕಳವು ಮಾಡಲು ಸುಲಭವಾಗಿಸಿದೆ. ಕೆಲ ವರ್ಷಗಳಿಂದ ಆಸ್ಪತ್ರೆ ಆವರಣ, ಬಸ್ ನಿಲ್ದಾಣ, ಕಚೇರಿಯ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳೇ ಹೆಚ್ಚಾಗಿ ಕಳ್ಳತನವಾಗಿದೆ. ಇಲ್ಲಿ ಯಾವುದೆ ಪೊಲೀಸರು ಕಾವಲು ಇರುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳತು ಕೈಚಳಕ ತೋರುತ್ತಿದ್ದಾರೆ. ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆ ರೂಪಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.
ಕೆಲ ಕಡೆ ಪಾರ್ಕಿಂಗ್ : ಇಡೀ ನಗರದಾದ್ಯಂತ ಕೇವಲ ಕಡೆ ಮಾತ್ರ ದ್ವಿಚಕ್ರ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಎಲ್ಲ ಕಡೆ ರಸ್ತೆಗಳಲೇ ವಾಹನ ನಿಲುಗಡೆಯ ಸ್ಥಳಗಳಾಗಿವೆ. ಹೊಸ ಬಸ್ ನಿಲ್ದಾಣ, ರೈಲು ನಿಲ್ದಾಣ ಬಳಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಎಲ್ಲರೂ ಈ ಜಾಗದಲ್ಲಿ ವಾಹನ ನಿಲ್ಲಿಸುತ್ತಿಲ್ಲ. ಹೊಸ ಬಸ್‌ನಿಲ್ದಾಣದ ಹಾಗೂ ರೈಲು ನಿಲ್ದಾಣದ ಬಳಿ ಪಾರ್ಕಿಂಗ್‌ಗೆ ಅವಕಾಶ ಇದ್ದರೂ ಹೆಚ್ಚಿನ ಜನ ಇದನ್ನೂ ಸದುಪಯೋಗ ಪಡೆದುಕೊಳ್ಳುತ್ತಿಲ್ಲ . ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುತ್ತಿದ್ದಾರೆ. ಇಲ್ಲಿನ ವಾಣಿಜ್ಯ ಮಳಿಗೆಗಳ ರಸ್ತೆಯಂದೆ ಬಿಂಬಿತವಾಗಿರುವ ಬೆಂಗಳೂರು ರಸ್ತೆ ಏಕಪಥಯಾಗಿದ್ದು ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಬೈಕ್, ಆಟೋ ಹಾಗೂ ಕಾರುಗಳು ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಈ ರಸ್ತೆಯಲ್ಲಿ ಜನರು ಸಂಚಾರಿಸಲು ಸಂಕಷ್ಟ ಪಡಬೇಕು. ಅಲ್ಲದೆ, ಹಳೆಯ ಬಸ್ ನಿಲ್ದಾಣಕ್ಕೆ ಪಾರ್ಕಿಂಗ್ ಸ್ಥಳ ಇಲ್ಲದೆ ಖಾಸಗಿ ಹೋಟೆಲ್‌ಗಳ ಆವರಣದಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆ.
ಪಾದಚಾರಿ ರಸ್ತೆಯಿಲ್ಲ : ಇಡೀ ಬೆಂಗಳೂರು ರಸ್ತೆಯನ್ನೇ ಒಂದೆಡೆ ಬೈಕ್, ಆಟೋ, ಕಾರುಗಳು ಆಕ್ರಮಿಸಿಕೊಂಡರೆ ಮತ್ತೊಂದು ಕಡೆ ಪಾದಚಾರಿ ರಸ್ತೆ, ಫುಟ್‌ಪಾತ್ ವ್ಯಾಪಾರಿಗಳು, ಅಂಗಡಿ ಮಳಿಗೆ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಜನರು ಅನಿವಾರ್ಯವಾಗಿ ರಸ್ತೆಯ ಮಧ್ಯೆ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅಪಘಾತಕ್ಕೂ ಎಡೆ ಮಾಡಿ ಕೊಡುತ್ತಿದೆ. ನಗರದ ಬಹುತೇಕ ರಸ್ತೆಗಳ ಒತ್ತುವರಿಯಾಗಿವೆ. ದುರ್ಗಮ್ಮ ಗುಡಿ ರಸ್ತೆ, ರಾಯಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನಾಲ್ಕು ಚಕ್ರದ ವಾಹನಗಳು ಸಂಚಾರಿಸಲು ಸಂಕಷ್ಟ ಅನುಭವಿಸುತ್ತಿವೆ. ಜನರ ಓಡಾಟಕ್ಕಾಗಿ ಮೀಸಲಿದ್ದ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಮಳಿಗೆಗಳು ಅರ್ಧ ರಸ್ತೆಯನ್ನು ಅವರಿಸಿಕೊಂಡಿದೆ.
ಸಿಬ್ಬಂದಿ ಕೊರತೆ : ನಗರದಲ್ಲಿ ಪ್ರಮುಖ ವೃತ್ತಗಳ ಎರಡು ರಸ್ತೆಗಳ ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ನಿಯಂತ್ರಿಸಲು ಅಧಿಕಾರಿಗಳು ಹರಸಾಹಸಪಡಬೇಕಿದೆ. ಇಲ್ಲಿನ ಸಂಚಾರ ಠಾಣೆಗೆ ಸಿಬ್ಬಂದಿ ನಿಯೋಜಿಸಿಲ್ಲ. ಈಗ ಕೆಲಸ ಮಾಡುತ್ತಿರುವವರಿಗೆ ಕರ್ತವ್ಯದ ಒತ್ತಡ ಹೆಚ್ಚಾಗಿದೆ. ರಾತ್ರಿ ಇಡೀ ಕೆಲಸ ಮಾಡಿದವರು ಬೆಳಗ್ಗೆಯೇ ರಸ್ತೆಗೆ ಇಳಿಯುತ್ತಿದ್ದಾರೆ. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ದಿನದ 24ಗಂಟೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಕೆಲವರು ಟ್ರಾಫಿಕ್‌ನಿಂದ ಸಿವಿಲ್ ಸ್ಟೇಷನ್‌ಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೋಟ್.... ನಗರದಲ್ಲಿ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲು ನಿರ್ಧಾರ ಮಾಡಲಾಗಿತ್ತು. ಆದರೆ, ಇಲ್ಲಿನ ಪ್ರಮುಖ ವೃತ್ತದ ಎರಡು ರಸ್ತೆಗಳ ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆಯಿದೆ. ಈಗಾಗಲೇ ಸವಾರರಿಗೆ ಪರ್ಯಾಯ ರಸ್ತೆಯಲ್ಲಿ ಸಂಚಾರಿಸಲು ಅನುಕೂಲ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಪಾರ್ಕಿಂಗ್ ಬಗ್ಗೆ ಗಮನಹರಿಸಲಾಗುವುದು.
- ಡಾ.ವಿ.ಜೆ. ಶೋಭಾರಾಣಿ, ಎಸ್ಪಿ, ಬಳ್ಳಾರಿ.