ಯುವ ಬರಹಗಾರರಿಗೆ ಅವಕಾಶಗಳಿವೆ

Published on

ಬಳ್ಳಾರಿ ; ಈ ಕಾಲದ ಯುವ ಬರಹಗಾರರಿಗೆ ಸಾಕಷ್ಟು ಅವಕಾಶಗಳು ಇದ್ದಾಗ್ಯೂ ಕಥಾಲೋಕಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆಯಿದೆ ಎಂದು ಹಿರಿಯ ಕವಯತ್ರಿ ಸವಿತಾನಾಗಭೂಷಣ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಬಿಪಿಎಸ್ ಸಿ ಶಾಲೆ ಸಭಾಂಗಣದಲ್ಲಿ .ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಹಾಗೂ ಲೋಹಿಯಾ ಪ್ರಕಾಶನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ಕಥೆಗಾರ ಡಾ.ರಾಜಶೇಖರ ನೀರಮಾನ್ವಿ ನೆನಪು, ಕಥೆಗಳ ಕುರಿತ ಮಾತುಕತೆ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವ ಕಥೆಗಾರರು ಹೆಚ್ಚು ಹೆಚ್ಚು ಓದಬೇಕು. ನೂರಾರು ಕಥೆಗಳನ್ನು ಓದಿದರೆ ಮಾತ್ರ ಕಥೆ ಕಟ್ಟುವಿಕೆಯ ಪ್ರಕ್ರಿಯೆ ಸಿದ್ಧಿಸುತ್ತದೆ. ಈ ಹಿಂದೆ ಕಥೆಗಾರರಿಗೆ ಕಮ್ಮಟಗಳು ಇರಲಿಲ್ಲ. ಮಾರ್ಗದರ್ಶನ ಮಾಡುವವರು ಇರಲಿಲ್ಲ ಎಂದರು. ಕನ್ನಡ ಸಾಹಿತ್ಯ ಪ್ರಪಂಚ ಸಮೃದ್ಧವಾಗಿದ್ದು, ಕನ್ನಡ ಸಾಹಿತ್ಯದ ಮೂಲಕ ವಿಶ್ವದ ಸಾಹಿತ್ಯವನ್ನು ಅರಿಯಲು ಸಾಧ್ಯವಿದೆ. ಆ ಮಟ್ಟಿಗಿನ ಗಟ್ಟಿ ಸಾಹಿತ್ಯ ಕನ್ನಡದಲ್ಲಿದೆ. ಇದಕ್ಕೆ ಡಾ.ರಾಜಶೇಖರ ನೀರಮಾನ್ವಿಯವರ ಕಥೆಗಳೇ ಸಾಕ್ಷಿ ಎಂದು ತಿಳಿಸಿದರು. ಲೇಖಕರಾದವರು ತುಂಬಾ ಕಥೆಗಳನ್ನು ಬರೆಯಬೇಕೆಂದೇನಿಲ್ಲ. ಸಂಖ್ಯಾ ದೃಷ್ಟಿಯಲ್ಲಿ ಹೆಚ್ಚಿಸಬೇಕಾದ ಅಗತ್ಯವೂ ಇಲ್ಲ. ಡಾ.ರಾಜಶೇಖರ ನೀರಮಾನ್ವಿಯವರ ಎರಡು ಕಥಾ ಸಂಕಲನ ಸೇರಿ 12 ಕಥೆಗಳನ್ನು ಮಾತ್ರ ಬರೆದಿದ್ದಾರೆ. ಆದರೆ, ಇಂದು ಕನ್ನಡದ ಕಥಾ ಲೋಕದ ಬಗ್ಗೆ ಮಾತನಾಡುವಾಗ ನೀರಮಾನ್ವಿಯವರ ಕಥೆಗಳನ್ನು ಬಿಟ್ಟು ಚರ್ಚಿಸಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಕಥೆಗಳು ಕನ್ನಡದ ಕಥಾಲೋಕದಲ್ಲಿ ಛಾಪು ಮೂಡಿಸಿವೆ ಎಂದು ಹೇಳಿದರು.

ಹಿರಿಯ ಲೇಖಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಯಾವ ಕಥೆಯೂ ಮಾನದಂಡ ಇರುವುದಿಲ್ಲ. ಮಾನದಂಡ ಇಟ್ಟುಕೊಂಡು ಬರೆಯುವ ಕಥೆ, ಕಥೆ ಎನಿಸಿಕೊಳ್ಳುವುದಿಲ್ಲ. ಅನುಭವವನ್ನೇ ಇಟ್ಟುಕೊಂಡು ಕಥೆ ಬರೆಯಬೇಕು. ಬೇರೆಯವರು ಬರೆದಂತೆ ನಾನು ಬರೆಯುತ್ತೇನೆ ಎಂದು ಹೊರಡಬಾರದು. ಬೇರೆಯವರ ಮಾನದಂಡಗಳನ್ನಿಟ್ಟುಕೊಳ್ಳಬಾರದು. ತನ್ನ ಬದುಕಿನ ಅನುಭವಗಳಿಗೆ ಕಥೆಯ ರೂಪ ನೀಡಬೇಕು. ಅನುಭವದ ಮೂಲಕ ಕಥೆ ಹುಟ್ಟಬೇಕು ಎಂದು ಹೇಳಿದರು.

ಲೇಖಕ ಡಾ.ಚಿದಾನಂದ ಸಾಲಿ ಅವರು ಡಾ.ರಾಜಶೇಖರ ನೀರಮಾನ್ವಿಯವರ ಕಥೆಗಳು ಕುರಿತು ಮಾತನಾಡಿದರಲ್ಲದೆ, ಬಳಿಕ ಯುವ ಕಥೆಗಾರರ ಜತೆ ಸಂವಾದ ನಡೆಸಿದರು. ಸಂಜೆ ಜರುಗಿದ ಸಮಾರೋಪದಲ್ಲಿ ಸಮಾಜಮುಖಿ ಪತ್ರಿಕೆ ಸಂಪಾದಕ ಚಂದ್ರಕಾಂತ ವಡ್ಡು ಅವರು ನೀರಮಾನ್ವಿಯವರ ಬರವಣೆಗೆಯ ಗಟ್ಟಿತನ ಕುರಿತು ಪ್ರಸ್ತಾಪಿಸಿದರಲ್ಲದೆ, ನೀರಮಾನ್ವಿಯವರ ಕಥೆಗಳನ್ನು ಗುರುತಿಸುವಿಕೆ ಕೆಲಸವಾಗಿದೆ. ಆದರೆ, ಮತ್ತಷ್ಟೂ ಅವರ ಕೃತಿಗಳ ವಿಮರ್ಶೆ , ಸಂವಾದಗಳು ನಡೆಯುವಂತಾಗಬೇಕು ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net