ಬಳ್ಳಾರಿ: ರಂಗಭೂಮಿ ಮನೋರಂಜನೆಯ ಜತೆಗೆ ಮನೋವಿಕಾಸವನ್ನು ಕೊಡುವ ಸಮರ್ಥ ಮಾಧ್ಯಮವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಜೋರನೂರು ಕೊಟ್ರಪ್ಪ ಅಭಿಪ್ರಾಯ ಪಟ್ಟರು.
ನಗರದ ಸರಳಾದೇವಿ ಪದವಿ ಕಾಲೇಜಿನ ಸಭಾಂಗಣದಲ್ಲಿ ನಾಟಕ ವಿಭಾಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಮಹಿಳೆ ವಿಶೇಷ ಉಪನ್ಯಾಸ ಮತ್ತು ರಂಗಗೀತೆಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ, ರಂಗಭೂಮಿಯನ್ನು ಗಮನಿಸಿದರೆ ಮಹಿಳೆಯರು ತಮ್ಮ ಅಭಿನಯದ ಮೂಲಕ ಅನನ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಪುರುಷ ಪಾತ್ರಗಳನ್ನು ಮಹಿಳೆಯರೇ ಮಾಡಿರುವುದು ವಿಶೇಷ. ನಾಟಕ ಕಂಪನಿಗಳನ್ನು ನಡೆಸುವುದರ ಮೂಲಕ ತಮ್ಮ ಅಸ್ಮಿತೆಯನ್ನು ಮೆರೆದಿರುವುದು ಈಗ ಇತಿಹಾಸ ಎಂದರು.
ಹಿರಿಯ ರಂಗಭೂಮಿ ಕಲಾವಿದೆ ವೀಣಾಕುಮಾರಿ ಆದೋನಿ ಮಾತನಾಡಿ, ಕಲಾವಿದೆಯರನ್ನು ನಮ್ಮ ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಅವರಿಗೆ ನೈತಿಕ ಬೆಂಬಲವನ್ನು ನೀಡಿ ಪ್ರೋತ್ಸಾಹಿಸಿ ಘನತೆಯಿಂದ ನಡೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಪ್ರಹ್ಲಾದ ಚೌದ್ರಿ ಮಾತನಾಡಿ, ವಿದ್ಯಾರ್ಥಿಗಳು ರಂಗಭೂಮಿಯ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ನಶಿಸುತ್ತಿರುವ ರಂಗಭೂಮಿಯ ಕಡೆ ಮುಖ ಮಾಡಿ ಬೆಂಬಲವಾಗಿ ನಿಲ್ಲಬೇಕು ಎಂದರು.