ಬಳ್ಳಾರಿ : ಇಲ್ಲಿನ ಎಪಿಎಂಸಿ, ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕ, ಪಾಲಿಕೆ, ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲಾಸ್ಪತ್ರೆಗೆ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಗುರುವಾರ ಭೇಟಿ ನೀಡಿ ಇಲಾಖೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡರು.
ಎಪಿಎಂಸಿ : ನಗರದ ಎಪಿಎಂಸಿಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಆಲಿಸಿದರು. ವರ್ತಕರು ಖರೀದಿ ಮಾಡಿದ ತರಕಾರಿ ರಸೀದಿ ನೀಡ್ತಾರೆಯೇ ಎಂಬುದರ ಬಗ್ಗೆ ಕೆಲ ವರ್ತಕರ ಮತ್ತು ರೈತರ ಬಳಿ ವ್ಯಾಪಾರದ ಮಾಹಿತಿ ಪಡೆದುಕೊಂಡರು. ರೈತರಿಂದ ಕಮಿಷನ್ ವಸೂಲಿ ಮಾಡಲು ಎಪಿಎಂಸಿ ಕಾಯ್ದೆಯಲ್ಲಿ ಅವಕಾಶ ಇಲ್ಲ. ಖರೀದಿದಾರರಿಂದ ಕೇವಲ 2 ರೂ. ಕಮಿಷನ್ ಪಡೆಯಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಇಲ್ಲಿ ನೇರವಾಗಿ ರೈತರಿಂದಲೇ ರೂ.10 ವಸೂಲಿ ಮಾಡಲಾಗುತ್ತಿದ್ದು ಇದು ಅಕ್ರಮವಾಗಿದೆ. ವರ್ತಕರು ರೈತರಿಂದ ಉತ್ಪನ್ನಗಳನ್ನು ಖರೀದಿ ಮಾಡಿ ಹೆಚ್ಚುವರಿ ಕಮಿಷನ್‌ಗೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ತ್ಯಾಜ್ಯ ವಿಲೇವಾರಿ ಘಟಕ : ನಗರದ ಹೊರವಲಯದಲ್ಲಿರುವ ವೇಣಿ ವೀರಾಪುರ ಬಳಿಯ 84 ಎಕರೆ ವ್ಯಾಪ್ತಿಯಲ್ಲಿರುವ ಬೃಹತ್ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿ ಸುಮಾರು 18 ವರ್ಷಗಳಿಂದ ಸರಿಯಾಗಿ ನಿರ್ವಹಣೆಯಾಗದಿರುವುದರ ಕುರಿತು ಬೇಸರ ವ್ಯಕ್ತಪಡಿಸಿದರು. ಘಟಕದಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕು. ಅದನ್ನು ರೈತರಿಗೆ ನೀಡುವ ಮೂಲಕ ತೋಟಗಾರಿಕೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕು. ನಗರದ ಪ್ರತಿ ದಿನ ಸಂಗ್ರಹಣೆಗೊಳ್ಳುವ ಕಸವನ್ನು ವಿಂಗಡಿಸಿ ಇಲ್ಲಿಗೆ ಸರಬರಾಜು ಮಾಡಬೇಕು. ಸರಿಯಾದ ನಿರ್ವಹಣೆ ಇಲ್ಲ, ಬೆಂಕಿ ಹೊತ್ತಿಕೊಂಡರೆ ಸಂಪೂರ್ಣ ಭಸ್ಮವಾಗುತ್ತದೆ. ಪಾಲಿಕೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು ಎಂದು ಸೂಚಿಸಿದರಲ್ಲದೇ, ಇಲ್ಲಿನ ಪರಿಸರದಿಂದ ಮನುಷ್ಯರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುತ್ತಿದೆಯೇ ಎಂದು ವಿಚಾರಿಸಿದರು.
ಪಾಲಿಕೆ : ಪಾಲಿಕೆ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಸರಿಯಾಗಿ ನಿರ್ವಹಿಸದಿರುವ ಕುರಿತು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆಯೇ, ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತವರಿಗೆ ನೋಟಿಸ್ ನೀಡಲಾಗಿದೆಯೇ?, ಈವರೆಗೂ ಎಷ್ಟು ನೋಟಿಸ್‌ಗಳನ್ನು ನೀಡಿದ್ದೀರಿ ಎಂದು ಆಯುಕ್ತರಿಗೆ ಪ್ರಶ್ನಿಸಿದರು.
ನಗರದಲ್ಲಿ ತೆರಿಗೆದಾರರಿಂದ ಸಕಾಲದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆಯೇ, ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆಯೇ. ಹೋಟೆಲ್‌ಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಆದ್ಯತೆ ನೀಡುವಂತೆ ಪರಿಸರ ಇಂಜಿನಿಯರ್ ಅಧಿಕಾರಿಗಳಿಗೆ ಆದೇಶಿಸಿದರು.
ತಹಸೀಲ್ದಾರ್ ಕಚೇರಿ : ಇಲ್ಲಿನ ಹೊಸ ಡಿಸಿ ಭವನದಲ್ಲಿ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣೆ ವಹಿ ಪುಸ್ತಕಗಳನ್ನು ವಿಸ್ತರವಾಗಿ ಪರಿಶೀಲಿಸಿದರು. ಭೂಮಿ ಕೇಂದ್ರ, ಕಾವೇರಿ ತಂತ್ರಾಂಶ, ಪಹಣಿ ವಿತರಣೆ, ತಾಲೂಕು ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿ ಕುರಿತಂತೆ ಅನೇಕ ಮಾಹಿತಿಯನ್ನು ತಹಶೀಲ್ದಾರರಿಂದ ಪಡೆದುಕೊಂಡರು.
ಕಂದಾಯ ವಿಭಾಗದ ತಹಸೀಲ್ದಾರರು, ಶಿರಸ್ತೇದಾರರು, ಇತರೆ ಸಿಬ್ಬಂದಿ ತಪ್ಪದೇ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಕಾಯ್ದೆ-ಕಾನೂನುಗಳ ಅಧ್ಯಯನ ಮಾಡಬೇಕು. ಸಾರ್ವಜನಿಕ ಸೇವೆ ಒದಗಿಸುವಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು ಹಾಗೂ ಮಾಹಿತಿ ನೋಂದಣಿಯನ್ನು ತಪ್ಪಿಲ್ಲದಂತೆ ನಮೂದಿಸಬೇಕು. ದಾಖಲೆಗಳಿಗಾಗಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಎಂದರು. ಇದೇ ವೇಳೆ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸಂವಾದ ನಡೆಸಿ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡಬೇಕು. ಸರ್ಕಾರ ಸಂಬಳ ನೀಡುತ್ತಿದೆ, ಲಂಚದ ಆಮೀಷಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.
ಜಿಲ್ಲಾಸ್ಪತ್ರೆ : ಇಲ್ಲಿನ ಜಿಲ್ಲಾಸ್ಪತ್ರೆಯ ಒಳರೋಗಿಗಳ ವಾರ್ಡ್‌ಗೆ ಭೇಟಿ ನೀಡಿ ರೋಗಿಗಳ ಹಾಗೂ ಸಂಬಂಧಿಕರ ಜತೆ ಚಿಕಿತ್ಸೆ ಯಾವ ರೀತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಬಳಿಕ ಆಸ್ಪತ್ರೆಯಲ್ಲಿ ಯಾವೆಲ್ಲ ಚಿಕಿತ್ಸಾ ಸೌಲಭ್ಯಗಳ ದೊರೆಯಲಿವೆಜಿಲ್ಲಾ ಸರ್ಜನ್ ಡಾ.ಬಸರೆಡ್ಡಿಯಿಂದ ಮಾಹಿತಿ ಪಡೆದರು.