ಬಳ್ಳಾರಿ : ಚಿಕಿತ್ಸೆಗಾಗಿ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಸೂಪರ್ ಸೆಪ್ಷಾಲಿಟಿ ಆಸ್ಪತ್ರೆಯ ನಿರ್ಮಾಣದ ಕಾಮಗಾರಿ ದಶಕವೇ ಕಳೆದರೂ ತೆವಳುತ್ತಾ ಸಾಗಿದೆ.
ಇಲ್ಲಿನ ಟ್ರಾಮ್ ಕೇರ್ ಸೆಂಟರ್ ಆವರಣದಲ್ಲಿ ಈ ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿ ಆರಂಭವಾಗಿ ಹನ್ನೂಂದು ವರ್ಷಕ್ಕೂ ಅಧಿಕ ಕಳೆಯುತ್ತಿದ್ದರೂ ವೇಗ ಪಡೆದುಕೊಂಡಿಲ್ಲ. ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭ ಮಾಡಬೇಕಿತ್ತು. ಅನುದಾನದ ಕೊರತೆ, ಸರಿಯಾದ ಸಮಯಕ್ಕೆ ಹಣ ಬಿಡುಗಡೆಯಾಗದ ಕಾರಣ ಆಸ್ಪತ್ರೆ ನಿರ್ಮಾಣ ಕುಂಟುತ್ತಾ ಸಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. 2012 -13ರಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಆಸ್ಪತ್ರೆಗೆ ಆರಂಭದಲ್ಲಿ ಅಂದಾಜು 80 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಿತ್ತು. ಎರಡನೇ ಹಂತದಲ್ಲಿ 17.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ನಂತರ ಹೆಚ್ಚುವಾರಿಯಾಗಿ 25 ಕೋಟಿ ರೂ. ಬಿಡುಗಡೆ ಮಾಡಿದೆ. ಅನುದಾನದ ಕೊರತೆಯಿಂದ ಕಾಮಗಾರಿ ಮತ್ತೆ ವಿಳಂಬವಾಗಿದೆ. ಸದ್ಯ ಆಸ್ಪತ್ರೆ ಕಟ್ಟಡ ಹಾಗೂ ವಿವಿಧ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದಂತೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಅನುದಾನ ದೊರೆಯಬೇಕಿದೆ. ಸದ್ಯ ಸರ್ಕಾರದಿಂದ 17 ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಆಸ್ಪತ್ರೆ ನಿರ್ಮಾಣಕ್ಕಾಗಿ ಆರಂಭದಲ್ಲಿ ನೆರೆಯ ಆಂಧ್ರಪ್ರದೇಶದ ಹಯಗ್ರೀವ ಕನ್ಸ್‌ಸ್ಟಕ್ಷನ್ ಸಂಸ್ಥೆ ಕಾಮಗಾರಿ ನಿರ್ಮಾಣದ ಹೊಣೆ ಹೊತ್ತಿತ್ತು. ಆರಂಭದಲ್ಲಿ ಕಾಮಗಾರಿ ವೇಗವಾಗಿ ನಡೆಯಿತು. ಆದರೆ, ಸರ್ಕಾರ ಬದಲಾವಣೆ ಹಾಗೂ ಅನುದಾನ ಬಿಡುಗಡೆ ವಿಳಂಬದಿಂದ ಕಾಮಗಾರಿ ಮಂದಗಾತಿಯಲ್ಲಿ ಸಾಗಿತು. ಈ ಮಧ್ಯೆ ಕೊರೊನಾ ಕಾರಣದಿಂದ ಕೆಲಸವೇ ನಡೆಯಲಿಲ್ಲ. ವಿವಿಧ ಕಾರಣಗಳ ನೆಪವೊಡ್ಡಿ ಹಯಗ್ರೀವ ಕನ್‌ಸಕ್ಷನ್ ಸಂಸ್ಥೆ ಕಾಮಗಾರಿ ಸ್ಥಗಿತಗೊಳಿಸಿತು. ಸದ್ಯ ಕಾಮಗಾರಿ ಪೂರ್ಣಗೊಳಿಸುವಂತೆ ಬೆಂಗಳೂರಿನ ಮೂಲದ ಗುತ್ತಿಗೆದಾರರಿಗೆ ಕಾಮಗಾರಿಯ ಹೊಣೆ ವಹಿಸಲಾಗಿದೆ.
ಸಚಿವರ ಭರವಸೆ : ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ. ಶ್ರೀರಾಮುಲು ಬಿಜೆಪಿ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವೆ ಎಂಬ ಹೇಳಿಕೆ ನೀಡಿದ್ದರು. ಬಳಿಕ 2023ರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರ ಆಸ್ಪತ್ರೆ ಬಗ್ಗೆ ಗಮನಹರಿಸಲಿಲ್ಲ. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕರಾದ ಜಮೀರ್ ಅಹ್ಮದ್ ಖಾನ್ ಕೂಡ ಆಸ್ಪತ್ರೆ ಕಟ್ಟಡ ಮುಖ ಮಾಡಿ ಕೂಡ ನೋಡಿಲ್ಲ. ಕೇವಲ ಚುನಾವಣೆ ವೇಳೆ ಬರಪೂರ ಆಶ್ವಾಸನೆಗಳು ನೀಡುವ ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ಬಳಿಕ ಭರವಸೆಗಳನ್ನು ಹುಸಿ ಮಾಡುತ್ತಾರೆ ಎಂಬುದಕ್ಕೆ ಈ ಆಸ್ಪತ್ರೆಯ ಕಾಮಗಾರಿಯೇ ನಿರ್ದೇಶನವಾಗಿದೆ. ಈ ಭಾಗದ ಜನರು ಚಿಕಿತ್ಸೆಗಾಗಿ ಸದ್ಯ ಬೆಂಗಳೂರಿಗೆ ಪ್ರಯಾಣಿಸುವ ಅನಿವಾರ್ಯತೆ ಇದೆ. ಈ ಆಸ್ಪತ್ರೆ ಆರಂಭವಾದಲ್ಲಿ ಕಲ್ಯಾಣ ಕರ್ನಾಟಕ ಭಾಗ ಸೇರಿ ಬಳ್ಳಾರಿ, ವಿಜಯನಗರ , ಕೊಪ್ಪಳ ಹಾಗೂ ಆಂಧ್ರದ ನೆರೆಯ ಗ್ರಾಮಗಳಿಗೂ ಅನುಕೂಲವಾಗಲಿದೆ. ಈ ಆಸ್ಪತ್ರೆಯಲ್ಲಿ 450 ಬೆಡ್, ಸೆಂಟ್ರಲೈಸ್ಟ್ ಎಸಿ, ವ್ಹೀಲ್ ಆಧಾರಿತ ಬೆಡ್, ಕಾರ್ಡಿಯಾಲಿಜಿ, ರೇಡಿಯಾಲಜಿ, ಪ್ಲಾಸ್ಟಿಕ್ ಸರ್ಜರಿ ಸೇರಿ ವಿವಿಧ ಸೌಲಭ್ಯವುಳ್ಳ ಸೂಪರ್ ಸೆಪ್ಷಾಲಿಟಿ ಆಸ್ಪತ್ರೆ ಗುರಿ ಹೊಂದಲಾಗಿತ್ತು. ಆದರೆ, ಕಳೆದ ಹನ್ನೊಂದಕ್ಕೂ ಅಧಿಕ ವರ್ಷದಿಂದ ಕಾಮಗಾರಿ ನಡೆಯುತ್ತಿರುವುದರಿಂದ ಜನರಿಗೆ ಆಸ್ಪತ್ರೆಯ ಉದ್ಘಾಟನೆ ಯಾವ ವರ್ಷ ನಡೆಯಲಿದೆ ಎಂಬುದು ಪ್ರಶ್ನೆಯಾಗಿದೆ.
ಕೋಟ್.. ಸರ್ಕಾರಕ್ಕೆ ಹೆಚ್ಚುವಾರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ ಕೆಲ ಅನುದಾನ ಬಿಡುಗಡೆಯಾಗಿದೆ, ಇನ್ನೂ ಅನುದಾನ ಬಾಕಿಯಿದ್ದು ಬಿಡುಗಡೆಗೊಳಿಸದ ಬಳಿಕ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು.
- ಡಾ.ಟಿ. ಗಂಗಾಧರಗೌಡ, ನಿರ್ದೇಶಕ, ಬಿಮ್ಸ್, ಬಳ್ಳಾರಿ