ಬಳ್ಳಾರಿ : ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿದ್ದು, ಪೌರ ಕಾರ್ಮಿಕರ ಸೇವೆ ಅನನ್ಯ ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.
ಇಲ್ಲಿನ ವಾಲ್ಮೀಕಿ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಮಂಗಳವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರದ ಸ್ವಚ್ಚತೆ ಕಾಪಾಡುವ ಜವಾಬ್ದಾರಿ ಪೌರಕಾರ್ಮಿಕರ ಮೇಲಿದೆ. ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಗರದಲ್ಲಿ ಈಗಾಗಲೇ 130 ಪೌರಕಾರ್ಮಿಕರು ಖಾಯಂ ಉದ್ಯೋಗವನ್ನು ನೀಡಿದ್ದು, ಇನ್ನೂ 121 ಪೌರಕಾರ್ಮಿಕರನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರನ್ನು ಖಾಯಂ ಉದ್ಯೋಗವನ್ನು ಅತಿ ಶೀಘ್ರದಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.
ನಗರ ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನೂ ಕೆಲವು ಕಾಮಗಾರಿಗಳು, ರಸ್ತೆ ಅಗಲೀಕರಣ ಕಾಮಗಾರಿಗಳು ಬಾಕಿಯಿದ್ದು ಅದನ್ನು ಶೀಘ್ರದಲೇ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಸುವರ್ಣ ಬಳ್ಳಾರಿ ಮಾಡುವ ಕನಸು ನನ್ನದಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ 300 ಕೋಟಿ ರೂ. ಗಳು ನೀಡಲಾಗಿದ್ದು, ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಹಲವಾರು ಟೀಕೆಗಳು ಬಂದರೂ ನನ್ನ ಅಭಿವೃದ್ಧಿ ಕಾರ್ಯವನ್ನು ಮುಂದಿನ ಪೀಳಿಗೆಗೆ ಉಪಯೋಗವಾಗುವ ರೀತಿಯಲ್ಲಿ ಪೂರ್ಣಗೊಳಿಸುತ್ತೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಮಾತನಾಡಿ, ನಗರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಕೈಗೊಳ್ಳುತ್ತಿರುವ ಅವರ ಸೇವೆ ಅನನ್ಯವಾಗಿದೆ. ನಮ್ಮ ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವಿಕೆಗೆ ನಾವೆಲ್ಲರೂ ಸೇರಿ ಕೈಜೋಡಿಸಬೇಕಿದೆ ಎಂದರು.
ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಪೌರ ಕಾರ್ಮಿಕರ ಪರಿಶ್ರಮದಿಂದ ನಮ್ಮ ಗ್ರಾಮಗಳು, ಪಟ್ಟಣ ಹಾಗೂ ನಗರ ಪ್ರದೇಶಗಳು ಸ್ವಚ್ಛವಾಗಿವೆ. ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿರಿಸಿ ನಮ್ಮೆಲ್ಲರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದರು.
ಬಳಿಕ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪಾಲಿಕೆ ವತಿಯಿಂದ ಕಾರ್ಮಿಕರಿಗೆ ಆಯೋಜಿಸಿದ್ದ ಕ್ರಿಕೆಟ್, ಮ್ಯೂಸಿಕಲ್ ಚೇರ್ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.