ಚಾಲಕರ ಸೇವೆ ನಿಸ್ವಾರ್ಥದ್ದು

Published on

ಬಳ್ಳಾರಿ : ಚಾಲಕರು ಹಗಲು-ರಾತ್ರಿ ಕುಟುಂಬದಿಂದ ದೂರ ಉಳಿದು ಅತ್ಯಂತ ನಿಸ್ವಾರ್ಥ ಸೇವೆ ನೀಡುತ್ತಿದ್ದಾರೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.

ನಗರದ ಒಂದನೇ ಬಸ್ ಘಟಕದಲ್ಲಿ ಕೆಕೆಆರ್‌ಟಿಸಿ ಜಿಲ್ಲಾ ವಿಭಾಗ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಐದು ವರ್ಷಗಳ ಕಾಲ ನಿರಂತರ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಸುರಕ್ಷಾ ಚಾಲಕ ಬೆಳ್ಳಿ ಪದಕ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಚಾಲಕರು ಎಲ್ಲಾ ವಿಧಗಳಲ್ಲಿ ನಿಸ್ವಾರ್ಥ ಸೇವೆ ನೀಡುತ್ತಿದ್ದು, ಅವರ ನಿರಂತರ ಸೇವೆಯಿಂದ ಸರ್ಕಾರಕ್ಕೆ ಉತ್ತಮ ಗೌರವವಿದೆ ಎಂದರು.

ಎಡಿಸಿ ಮಹಮ್ಮದ್ ಎನ್.ಜುಬೇರ್ ಮಾತನಾಡಿ, ಚಾಲಕರು ಶಿಸ್ತಿನ ಸಿಪಾಯಿ ಇದ್ದಂತೆ. ಸಾರ್ವಜನಿಕ ಪ್ರಯಾಣಿಕರನ್ನು ಅತ್ಯಂತ ಸುರಕ್ಷಿತವಾಗಿ ಮನೆಗೆ ತಲುಪಿಸುವ ಮೂಲಕ ಸಾರಥಿಯಂತೆ ಕೆಲಸ ಮಾಡುತ್ತಾರೆ. ಸಾರ್ವಜನಿಕ ಪ್ರಯಾಣಿಕರು ದೇವರೆಂದೇ ಭಾವಿಸುತ್ತಾರೆ ಎಂದರು.

ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಮಾತನಾಡಿ, ಚಾಲಕ ಹಾಗೂ ಸಿಬ್ಬಂದಿ ನಿಗಮದ ಕನ್ನಡಿ ಇದ್ದಂತೆ. ದಿನನಿತ್ಯ ಯಾವುದೇ ಅಪಘಾತವಾಗದಂತೆ ಕ್ಷೇಮವಾಗಿ ಹೋಗಿ ಮರಳಿ ಬರುವುದರ ಮೂಲಕ ನಿಗಮಕ್ಕೆ ಕೀರ್ತಿ ತರಬೇಕು. ವೇಗದ ಮಿತಿ ಮನದಟ್ಟು ಮಾಡಿಕೊಂಡು, ಪಾದಾಚಾರಿಗಳನ್ನು ಗಮನದಲ್ಲಿರಿಸಿಕೊಂಡು, ರಸ್ತೆ-ಸಂಚಾರ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.

ಬಳಿಕ ವರ್ಷಗಳ ಕಾಲ ನಿರಂತರ ಅಪಘಾತ ರಹಿತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಸುರಕ್ಷಾ ಚಾಲಕ ಬೆಳ್ಳಿ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net