ಬಳ್ಳಾರಿ ; ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿ ಕೃಷಿಗೆ ಪೂರಕವಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ) ಪಾತ್ರ ಮಹತ್ವದಾಗಿದೆ ಎಂದು ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
ಇಲ್ಲಿನ ಬಸವಭವನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಎಂಎಸ್‌ಎಂಇ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ನೆಮ್ಮದಿಯಾಗಿದ್ದು, ಉತ್ತಮ ಬೆಳೆ ಬೆಳೆದಲ್ಲಿ ರಾಷ್ಟ್ರವೂ ನೆಮ್ಮದಿಯಾಗಿರುತ್ತದೆ. ರೈತರು ಸಮರ್ಪಕವಾಗಿ ಬೆಳೆ ಬೆಳೆದು, ದೇಶದ ಜನತೆಗೆ ಅನ್ನ ನೀಡುವುದರ ಜತೆಗೆ ವಿದೇಶಗಳಿಗೆ ಆಹಾರ ಉತ್ಪನ್ನಗಳನ್ನು ಕಳಿಸುವ ಶಕ್ತಿ ಹೊಂದಿದ್ದಾರೆ ಎಂದು ಹೇಳಿದರು.
ಸಿಎ ಸಿರಿಗೇರಿ ಪನ್ನರಾಜ್ ಮಾತನಾಡಿ, ಈ ದೇಶದ ಕೇವಲ ಶೇ. 1 ರಷ್ಟು ಜನಸಂಖ್ಯೆ ಕೈಯಲ್ಲಿ, ನಮ್ಮ ದೇಶದ ಶೇ. 40ಕ್ಕೂ ಹೆಚ್ಚಿನ ಸಂಪತ್ತು ಇದೆ. ಅಂತೆಯೇ ದೇಶದ ಶೇ. 50ಕ್ಕೂ ಹೆಚ್ಚು ಜನರು ಕೇವಲ ಶೇ. 3 ರಷ್ಟು ಸಂಪತ್ತು ಹೊಂದಿದ್ದಾರೆ. 2022ರ ಅಂಕಿ - ಅಂಶಗಳು ಇದನ್ನು ಹೇಳುತ್ತಿವೆ. ಅದಾಯ ಮತ್ತು ಆರ್ಥಿಕತೆ ಸರಿಯಾಗಿ ಹಂಚಿಕೆಯಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಶ್ರೀಕಾಂತ್ ಎಂ.ಬಂಡಿವಾಡ ಮಾತನಾಡಿ, ಕೃಷಿ ವಲಯ ಹಾಗೂ ಎಂಎಸ್‌ಎಂಇ ಕ್ಷೇತ್ರ ಸಬಲೀಕರಣವಾದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಂಎಸ್‌ಎಂಇಗಳ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಕೃಷಿ ವಲಯದ ಎಂಎಸ್‌ಎಂಇಗಳ ಬೆಳವಣಿಗೆಯಾದಲ್ಲಿ ದೇಶದಲ್ಲಿ ನಿರುದ್ಯೋಗದ ಪ್ರಮಾಣವೂ ಕಡಿಮೆಯಾಗುತ್ತದೆ ಎಂದರು.
ಬಳಿಕ ಸಮಾರಂಭದಲ್ಲಿ ಉದ್ದಿಮೆದಾರರಿಗೆ, ರೈತರಿಗೆ ಒಂದು ದಿನದ ವಿಶೇಷ ಕಾರ್ಯಾಗಾರ ನಡೆಯಿತು.