ಬಳ್ಳಾರಿ : ಭಾರತದ ಸಂವಿಧಾನವು ಶಾಂತಿ ಮಾರ್ಗದ ಮೂಲವಾಗಿದೆ ಎಂದು ಕಾಲೇಜು ಉಪನ್ಯಾಸಕ ಕೆ.ಪಿ.ಮಂಜುನಾಥರೆಡ್ಡಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜಿನಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ(ಎನ್‌ಎಸ್‌ಎಸ್)ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದಾಗ ಸಮಾಜ ಸುಖಮಯವಾಗಿರುತ್ತದೆ ಎಂದರು.
ಉಪನ್ಯಾಸಕ ಶ್ಯಾಮಣ್ಣ ಮಾತನಾಡಿ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವಂತೆ ಮಾಡಿದ್ದು ಸಂವಿಧಾನ. ನಮ್ಮ ಸಂವಿಧಾನವು ಮಹಿಳೆಯರು, ತಳ ಸಮುದಾಯ, ನಿರ್ಲ್ಯಕ್ಷಿತ ಸಮುದಾಯಗಳ ಉದ್ದಾರದ ಜೊತೆಗೆ ಸರ್ವರೂ ಸಮನಾಗಿ ಬಾಳಬೇಕೆಂಬ ಧ್ಯೇಯದಿಂದ ಕೂಡಿದ್ದು, ಈ ಮೂಲಕ ಸಮರ್ಥ ರಾಷ್ಟದ ನಿರ್ಮಾಣದಲ್ಲಿ ಸಂವಿಧಾನ ಮಹತ್ತರ ಪಾತ್ರವಹಿಸಲಿದೆ ಎಂದರು.