ಬಳ್ಳಾರಿ ; ಉತ್ತರ ಕರ್ನಾಟಕದಲ್ಲಿಯೇ ಏಕೈಕ ರಾಷ್ಟ್ರೀಯ ಫುಟ್ಬಾಲ್ ಮೈದಾನವು ನಗರದಲ್ಲಿ ನಿರ್ಮಾಣವಾಗಿದೆ. ಆದರೆ, ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದ್ದು, ಅವೈಜ್ಞಾನಿಕದಿಂದ ನಿರ್ಮಾಣವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ನಗರದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ನಿರ್ಮಿತಿ ಕೇಂದ್ರದಿಂದ ಕೋಟ್ಯಾಂತರ ರೂ. ವೆಚ್ಚದಲ್ಲಿ 2013ರಲ್ಲಿ ಬಿಡಿಎಎ ರಾಷ್ಟ್ರೀಯ ಫುಟ್ಬಾಲ್ ಮೈದಾನವನ್ನು ನಿರ್ಮಿಸಿದೆ. ಆರಂಭದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯ ಆಯೋಜಿಸಿ ಕ್ರೀಡಾ ಅಭಿಮಾನಿಗಳನ್ನು ಮೈದಾನಕ್ಕೆ ಸೆಳೆದಿತ್ತು. ಕರೊನಾದಲ್ಲಿ ಎರಡು ವರ್ಷ ಸಂಪೂರ್ಣವಾಗಿ ಮೈದಾನದಲ್ಲಿ ಕ್ರೀಡೆ ಆಯೋಜಿಸಿದಂತೆ ಸೂಚಿಸಲಾಯಿತು. ಕರೊನಾ ಬಳಿಕ ಬೆರಣಿಕೆಯಷ್ಟೇ ಪಂದ್ಯಗಳು ನಡೆದಿದ್ದು ಬಿಟ್ಟರೆ ಇನ್ನೂ ಯಾವ ಪಂದ್ಯಗಳು ನಡೆದಿಲ್ಲ. ಫುಟ್ಬಾಲ್ ಮೈದಾನವನ್ನು ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಮೈದಾನದ ಸುತ್ತಲೂ ಪ್ರೇಕ್ಷಕರಿಗಾಗಿ ನಿರ್ಮಿಸಿರುವ ಗ್ಯಾಲರಿಯೂ ಪಂದ್ಯ ಆಡುವ ವೇಳೆ ಆಟಗಾರರಿಗೆ ತಾಕುತ್ತದೆ. ಇದರಿಂದ ವೇಗವಾಗಿ ಓಡಿ ಚೆಂಡು ತಡೆಯುವ ವೇಳೆ ಗ್ಯಾಲರಿಗೆ ತಲೆ ತಾಕಿ ಪೆಟ್ಟು ಬೀಳುವ ಭಯವಿದೆ. ಯಾವುದೇ ಮೈದಾನದ ಒಳಾಂಗಣ ಹಾಗೂ ಪ್ರೇಕ್ಷಕರ ಗ್ಯಾಲರಿಯೂ ಹತ್ತು ಅಡಿ ಅಂತರ ಇರಬೇಕು ಎಂಬ ನಿಯಮವಿದೆ. ಆದರೆ, ವೈಜ್ಞಾನಿಕವಾಗಿ ನಿರ್ಮಿಸದೆ ಇರುವುದರಿಂದ ಮೈದಾನದಲ್ಲಿ ಪಂದ್ಯವಾಡಲು ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.
ಯೋಗ್ಯವಲ್ಲದ ವರದಿ : ಫುಟ್ಬಾಲ್ ಮೈದಾನ ನಿರ್ಮಾಣವಾಗಿ ಹತ್ತು ವರ್ಷಕ್ಕಿಂತ ಅಧಿಕ ಕಳೆದಿದೆ. ಮೈದಾನಕ್ಕೆ ಅಳವಡಿಸಿರುವ ಸಿಂಥೇಟಿಕ್ ಟರ್ಫ್ ಐದರಿಂದ ಆರು ವರ್ಷದ ಮಿತಿಯಿದೆ. ಆದ್ದರಿಂದ, ಮೈದಾನ ನಿರ್ಮಾಣವಾದ ವೇಳೆ ಹಾಕಿರುವ ಸಿಂಥೇಟಿಕ್ ಟರ್ಫ್ ಸಂಪೂರ್ಣವಾಗಿ ಹಾಳಾಗಿದ್ದು ಈವರೆಗೆ ಬದಲಾವಣೆಗೊಳಿಸಿಲ್ಲ. ಸದ್ಯ, ಸಿಂಥೇಟಿಕ್ ಟರ್ಫ್ ಕಠಿಣವಾಗಿದ್ದು ಆಟಗಾರರಿಗೆ ಗಾಯಗಳು ಆಗುವ ಭೀತಿಯಿದೆ. ಆದ್ದರಿಂದ ರಾಜ್ಯ ಫುಟ್ಬಾಲ್ ಮಂಡಳಿಯೂ ಮೈದಾನವು ಪಂದ್ಯಕ್ಕೆ ಯೋಗ್ಯವಲ್ಲ ಎಂಬ ವರದಿ ನೀಡಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಹೊನಲು ಬೆಳಕಿನ ಪಂದ್ಯಗಳಿಗಾಗಿ ಅಳವಡಿಸಿದ್ದ ಬೃಹತ್ ಫ್ಲಡ್ ಲೈಟ್‌ಗಳು ಹಲವು ತಿಂಗಳಿಂದ ಕಾರ್ಯ ನಿರ್ವಹಿಸದೆ ಇರುವುದರಿಂದ ದುಸ್ಥಿತಿಗೆ ತಲುಪಿವೆ. ಪ್ರೇಕ್ಷಕರ ಆಸನಕ್ಕಾಗಿ ಒಂದು ಕಡೆ ಗ್ಯಾಲರಿಯೂ ನಿರ್ಮಿಸಲಾಗಿದ್ದು ವಿಪರೀತ ಬಿಸಿಲು, ಗಾಳಿ ಹಾಗೂ ಮಳೆಗೆ ಕುರ್ಚಿಗಳು ಮುರಿದಿವೆ. ಒಟ್ಟಾರೆ, ರಾಜ್ಯದಲ್ಲಿಯೇ ಎರಡನೇಯ ರಾಷ್ಟ್ರೀಯ ಫುಟ್ಬಾಲ್ ಮೈದಾನವೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಹಾಳಾಗಿವೆ. ರಾಜ್ಯಮಟ್ಟದಲ್ಲಿ ಪಂದ್ಯಗಳು ಆಯೋಜಿಸಿ ಪ್ರೇಕ್ಷಕರ ಸೆಳೆಯಬೇಕಿದ್ದ ಮೈದಾನದಲ್ಲಿ ಕಳೆದ ಫಿಫಾ ಫುಟ್ಬಾಲ್ ಹಾಗೂ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಗಳನ್ನು ಸಾರ್ವಜನಿಕರ ವೀಕ್ಷಣೆಗೆ ಎಲ್‌ಸಿಡಿ ಸ್ಕ್ರೀನ್ ಅಳವಡಿಸಿದ್ದು ಇವರ ಸಾಧನೆ ಎನ್ನಬಹುದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಚಿವರಾಗಿದ್ದ ವೇಳೆ ಮೈದಾನದ ಕಾಳಜಿ ವಹಿಸಿಲ್ಲ ಎಂಬುದು ಜಿಲ್ಲೆಯ ಕ್ರೀಡಾ ಅಭಿಮಾನಿಗಳ ಅಭಿಪ್ರಾಯವಾಗಿದೆ.
ಬಾಕ್ಸ್ : ಮೈದಾನದಲ್ಲಿ ಹಾಳಾಗಿರುವ ಸಿಂಥೇಟಿಕ್ ಟರ್ಫ್‌ವು ಕೆಳಗಡೆ ಸಂಪೂಣವಾಗಿ ಅಗೆದು, ಅದರ ಕೆಳಗಡೆ ಸಣ್ಣ ಗಾತ್ರ ಮರಳು ಅಳವಡಿಸಿ ನಂತರ ಟೆಕ್ನಿಕಲ್ ತಂಡದ ಮೂಲಕ ಹೊಸ ಸಿಂಥೇಟಿಕ್ ಟರ್ಫ್ ಅಳವಡಿಸಬೇಕು. ಟರ್ಫ್‌ಗಾಗಿ ಐದರಿಂದ ಆರು ಕೋಟಿ ರೂ. ಅನುದಾನ ವ್ಯಯಿಸಬೇಕಿದೆ. ಸದ್ಯ ಇರುವ ಪರಿಸ್ಥಿತಿಯಲ್ಲಿ ಅನುದಾನ ಬಿಡುಗಡೆ ಮಾಡುವುದು ಅನುಮಾನ ಎಂಬುದಾಗಿ ಹಿರಿಯ ಫುಟ್ಬಾಲ್ ತರಬೇತುದಾರರು ತಿಳಿಸಿದರು.
ಕೋಟ್.... ಜಿಲ್ಲೆಯ ಬಿಡಿಎಎ ಫುಟ್ಬಾಲ್ ಮೈದಾನದ ಸಿಂಥೇಟಿಕ್ ಟರ್ಫ್ ಹಾಳಾಗಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸದಾಗಿ ಸಿಂಥೇಟಿಕ್ ಟರ್ಫ್ ಅಳವಡಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
- ಕೆ.ಗ್ರೇಸಿ, ಸಹಾಯಕ ನಿದೇಶಕಿ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಬಳ್ಳಾರಿ