ಬಳ್ಳಾರಿ : ಹೈದ್ರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲ್ಯಾಣ ಕರ್ನಾಟಕ ಸ್ವಾತಂತ್ರೃ ಹೊಂದಲು ಮಹನೀಯರ ಹೋರಾಟ, ತ್ಯಾಗ ಹಾಗೂ ಬಲಿದಾನದಿಂದ ವಿಮೋಚನೆ ಹೊಂದಿತು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ(ಮಾ.ಪು) ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಬುಧವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲಬುರಗಿಯಲ್ಲಿ ಸ್ಥಾಪಿಸಿ, ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ ಎಲ್ಲ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ, ರಸ್ತೆ ಸಂಪರ್ಕ, ಶುದ್ಧ ಕುಡಿವ ನೀರಿನ ವ್ಯವಸ್ಥೆ, ಇನ್ನಿತರೆ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ವಿಶೇಷ ಅನುದಾನ ಮೀಸಲಿರಿಸುವ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ 1954.22 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಅದರಲ್ಲಿ 5524 ಕಾಮಗಾರಿಗಳನ್ನು ಕೈಗೆತ್ತಿಕೊಂಡು 4966 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ 1412.84 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ. ಬಾಕಿ ಉಳಿದ 402 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಎ ಮತ್ತು ಬಿ ಖಾತಾ ಯೋಜನೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ ಕಾಯ್ದೆರೂಪಕ್ಕೆ ತಂದು ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಜಾರಿಗೆ ತರಲಾಗಿದೆ. ಅನೇಕ ವರ್ಷಗಳಿಂದ ಅನಧಿಕೃತವಾಗಿದ್ದ ಕಟ್ಟಡ ಮತ್ತು ನಿವೇಶನಗಳಿಗೆ ಇ ಖಾತಾ ನೀಡುವುದರ ಮೂಲಕ ತೆರಿಗೆ ವ್ಯಾಪ್ತಿಗೆ ತಂದು ಅನೇಕ ಬಡಜನರ ಕನಸನ್ನು ನನಸಾಗಿ ಮಾಡಲಾಗಿದೆ ಎಂದರು.
ಸಿಎಂ ಆಶಯದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಜಾರಿಗೊಳಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಕುಡಿವ ನೀರು ಹಾಗೂ ಸ್ವಚ್ವತೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಸಂಸದ ಈ.ತುಕಾರಾಮ್ ಮಾತನಾಡಿ, ಡಾ.ನಂಜುಂಡಪ್ಪ ವರದಿಯಲ್ಲಿ ರಾಜ್ಯದ 175 ತಾಲೂಕುಗಳಲ್ಲಿ 114 ತಾಲೂಕು ಹಿಂದುಳಿದ ವರದಿಯಾದರೆ, ಕಲ್ಯಾಣ ಕರ್ನಾಟಕ ಭಾಗದ 39 ತಾಲೂಕುಗಳಲ್ಲಿ 21 ತಾಲೂಕುಗಳು ಅತ್ಯಂತ ಹಿಂದುಳಿದ ಎಂದು ವರದಿ ನೀಡಿದ ಬೆನ್ನಲ್ಲೆ ಸಿಎಂ ಎಸ್.ಎಂ ಕೃಷ್ಣ ಅವರು ವಿಶೇಷ ಸ್ಥಾನಮಾನ ದೊರಕಿಸಲು ಪ್ರಯತ್ನ ಪಟ್ಟರು ಎಂದು ಮಾಹಿತಿ ನೀಡಿದರು.
ಅಖಂಡ ಜಿಲ್ಲೆಯ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ರೂಪುಗೊಂಡು ಕಾರ್ಯಪ್ರವೃತ್ತವಾಗಿದ್ದು, ಮುಂಬರುವ ದಿನಮಾನಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಉಜ್ವಲ ಭವಿಷ್ಯ ನಿರ್ಮಿಸೋಣ ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಿದ್ದ ಪ್ರಬಂಧ, ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಬಾಕ್ಸ್ : ಜಿಲ್ಲೆಯಲ್ಲಿ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ದಿನಾಚರಣೆಗೆ ಆಹ್ವಾನ ಪತ್ರಿಕೆಯಲ್ಲಿದ್ದ ಆಹ್ವಾನಿಸಿದ್ದ ಬಹುತೇಕ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಲಿಲ್ಲ. ಕೇವಲ ಅಧಿಕಾರಿಗಳಿಗೆ ಸೀಮಿತ ಎಂಬಂತೆ ಕಾರ್ಯಕ್ರಮ ನಡೆಯಿತು.