ಪಾಲಿಕೆಯ ಸಮಸ್ಯೆಗಳ ಮಹಾಪೂರ, ನಿರ್ವಹಣೆ ಕಷ್ಟ

Published on

ಬಳ್ಳಾರಿ : ಮಹಾನಗರ ಪಾಲಿಕೆಯ ಅದಾಯ ಕಡಿಮೆಯಿದ್ದು, ಕಾಮಗಾರಿಗಳಿಗೆ ಅನುದಾನ ಸಾಲುತ್ತಿಲ್ಲ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಸಾರ್ವಜನಿಕರಿಂದ ವಿವಿಧ ತೆರಿಗೆಗಳ ಮೂಲಕ ವರ್ಷಕ್ಕೆ 42 ಕೋಟಿ ರೂ. ಸಂಗ್ರಹವಾಗುತ್ತಿದೆ. ನಗರದ ವಿವಿಧ ಯೋಜನೆಗಳು ಪೂರ್ಣಗೊಳಿಸಲು ತಿಂಗಳಿಗೆ ಮೂರರಿಂದ ನಾಲ್ಕು ಕೋಟಿ ರೂ. ಅಗತ್ಯವಿದೆ.ಆದ್ದರಿಂದ, ಪ್ರತಿ ವರ್ಷ ನೂರ ಕೋಟಿ ರೂ. ಸಂಗ್ರಹಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಸದ್ಯ, ಪಾಲಿಕೆಗೆ ಇರುವ ಅದಾಯದಿಂದ ಪೌರ ಹಾಗೂ ಇತರ ಕಾರ್ಮಿಕರಿಗೆ ನಾಲ್ಕು ತಿಂಗಳಿಗೆ ಒಮ್ಮೆ ವೇತನ ಬಿಡುಗಡೆಗೊಳಿಸಲಾಗುತ್ತಿದೆ. ನಗರದಲ್ಲಿ ನಡೆದ ಅಮೃತ ಯೋಜನೆಯ ಕಾಮಗಾರಿಗಳ ಪರಿಶೀಲನೆಗೆ ವಿರೋಧ ಹಾಗೂ ಆಡಳಿತ ಪಕ್ಷದ ಸದಸ್ಯರೊಂದಿಗೆ ಕಮಿಟಿ ರಚಿಸಿ ಪರಿಶೀಲನೆ ನಡೆಸಲಾಗುವುದು ಎಂದರು.

ಪಾಲಿಕೆ ಆಯುಕ್ತ ಖಲೀಲ್ ಸಾಬ್ ಮಾತನಾಡಿ, ನಗರದಲ್ಲಿ ಕುಡಿಯುವ ನೀರು ಸರಬಾರಜು, ಒಳ ಚರಂಡಿ ಹಾಗೂ ರಾಜ ಕಾಲುವೆಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವು ಕಡೆ ಸಣ್ಣಪುಟ್ಟ ಸಮಸ್ಯೆಗಳನ್ನು ಕೆಲ ದಿನಗಳಲ್ಲಿಯೇ ಬಗೆಹರಿಸಲಾಗುವುದು. ಪಾಲಿಕೆ ನಿರ್ವಹಣೆಗೆ 570 ಸಿಬ್ಬಂದಿ ಅಗತ್ಯವಿದ್ದು, ಸದ್ಯ 170 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸಮಸ್ಯೆಗಳ ನಿರ್ವಹಣೆ ಕಷ್ಟವಾಗಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪಾಲಿಕೆ ಸದಸ್ಯರು ನಮ್ಮ ಗಮನಕ್ಕೆ ತನ್ನಿ , ಎಲ್ಲರೂ ಸೇರಿ ಶಾಸಕರ ಬಳಿ ಚರ್ಚಿಸೋಣ ಎಂದು ದನಿಗೂಡಿದರು.

ಪಾಲಿಕೆ ಸದಸ್ಯ ಎಂ.ಪ್ರಭುಂಜನ ಕುಮಾರ ಮಾತನಾಡಿ, ಪಾಲಿಕೆಯಲ್ಲಿ 2016 ರಿಂದ 2024 ರವರೆಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ 130 ಕೋಟಿ ರೂ. ಅವ್ಯವಹಾರ ನಡೆದಿದೆ. ಅದರ, ವರದಿ ನೀಡುವಂತೆ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದು ಇಲ್ಲಿಯವರೆಗೆ ನೀಡಿಲ್ಲ ಎಂದು ದೂರಿದರು. ವಾರ್ಡ್ 3 ರಲ್ಲಿ ಒಳಚರಂಡಿ ಕಾಮಗಾರಿಯ ಕುರಿತು, ಜನವರಿ ಹಾಗೂ ಆಗಸ್ಟ್ ನಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯ ಅನುಪಾಲನಾ ವರದಿ, ಪಾಲಿಕೆಗೆ ಸಂಬಂಧಿಸಿದಂತೆ ಕಡತಗಳ ಮಾಹಿತಿ, ಹೊರಗುತ್ತಿಗೆ ಆಧಾರದಲ್ಲಿ ಅಭಿಯಂತರರ ನೇಮಕಾತಿ ಕುರಿತು ಮಾಹಿತಿ ನೀಡುವಂತೆ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದರು ಸ್ಪಂದನೆ ನೀಡಿಲ್ಲ ಎಂದು ಆಯುಕ್ತರ ವಿರುದ್ಧ ಕೋಪಗೊಂಡರು. ಕೇಳಿದ ಮಾಹಿತಿಯನ್ನು ಆಯುಕ್ತರು ನೀಡುವವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟಹಿಡಿದರು. ಇದಕ್ಕೆ ಆಯುಕ್ತರು, ಎರಡ್ಮೂರು ದಿನಗಳಲ್ಲಿ ನೀವು ಕೇಳಿದ ಎಲ್ಲ ಮಾಹಿತಿಯನ್ನು ಅಧಿಕಾರಿಗಳು ಮೂಲಕ ತಲುಪಿಸಲಾಗುವುದು ಎಂದು ಸಭೆಯಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ ವಿಷಯವಾರು ಚರ್ಚೆಗೆ ಅನುಮತಿ ನೀಡಿದರು.

ಬಾಕ್ಸ್ : ಸಾಮಾನ್ಯ ಸಭೆಯ ಬೆಳ್ಗಗೆ 10.30 ನಿಗದಿಯಾಗಿತ್ತು. ಆದರೆ, ಮೇಯರ್, ಆಯುಕ್ತರು, ಸದಸ್ಯರ ವಿಳಂಬದಿಂದ ಎರಡು ಗಂಟೆ ತಡವಾಗಿ ಆರಂಭವಾಯಿತು. ಅಲ್ಲದೆ, ಉಪ ಮೇಯರ್ ಸಭೆ ಆರಂಭವಾಗಿ ಅರ್ಧ ಗಂಟೆ ಬಳಿಕ ವೇದಿಕೆಗೆ ಆಗಮಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ, ಇನ್ನೂ ಉಳಿದ ಪಾಲಿಕೆ ಸದಸ್ಯರು ಮೂರು ಗಂಟೆಗೆ ತಡವಾಗಿ ಹಾಜರಾದರು. ಈ ಸಭೆಯಲ್ಲಿ ಪಾಲಿಕೆ ಸದಸ್ಯರು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಪಡಿಸಿದರು. ಮೇಯರ್ ಹಾಗೂ ಆಯುಕ್ತರು ಸಭೆಯನ್ನು ಗಂಭೀರವಾಗಿ ಪರಿಗಣನಗೆ ತೆಗೆದುಕೊಂಡಂತೆ ಕಾಣಲಿಲ್ಲ. ಅಲ್ಲದೆ, ಕೆಲವೊಂದು ಮುಖ್ಯ ವಿಷಯಗಳ ಗಂಭೀರ ಚರ್ಚೆ ವೇಳೆ ಪಾಲಿಕೆ ಸದ್ಯಸರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸುವ ವೇಳೆ ಮೇಯರ್ ನಗುತ್ತಾ ಆಲಿಸಿದರು. ಪಾಲಿಕೆಯ ಮಾಹಿತಿಗಳನ್ನು ಸದಸ್ಯರಿಗೆ ನೀಡಲಾದ ವಿವರದ ಪುಸ್ತಕದಲ್ಲಿ ಸದಸ್ಯರ ಹೆಸರು ನಮೂದಿಸದೆ ಬೇರೆ ಹೆಸರುಗಳು ಮೂಲಕ ಪಡೆಯಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದರು. ಅದಕ್ಕೆ, ನನ್ನ ಹೆಸರು ಕೂಡ ಬೇರೆಯುವರು ಬರೆದಿದ್ದಾರೆ ಎಂದು ಮೇಯರ್ ಸಮರ್ಥಿಸಿಕೊಂಡರು. ಒಟ್ಟಾರೆ ಜನರ ಅನುಕೂಲಕ್ಕಾಗಿ ಆಗಬೇಕಾದ ಸಾಮಾನ್ಯ ಸಭೆ ತೌಡು ಕುಟ್ಟುವ ಕೆಲಸವಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿ. ಎಂ. ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net