ಅಭಿವ್ಯಕ್ತಿ ಮಾಧ್ಯಮ ಬೇರೆ ಭಾವವೊಂದೇ

Published on

ಬಳ್ಳಾರಿ : ಸಾಹಿತ್ಯ, ಕಲೆ ಹಾಗೂ ಸಂಗೀತ ಇವೆಲ್ಲವುಗಳಿಗೆ ಒಂದು ಅವಿನಾಭಾವ ಸಂಬಂಧವಿದೆ. ಇಲ್ಲಿ ರೂಪ ಮತ್ತು ಅಭಿವ್ಯಕ್ತಿ ಮಾಧ್ಯಮ ಬೇರೆಯಾಗಿದ್ದರೂ ಅದು ಹೊಮ್ಮಿಸುವ ಭಾವ ಒಂದೇ ಎಂದು ಲೇಖಕ

ದಸ್ತಗೀರಸಾಬ್ ದಿನ್ನಿ ಹೇಳಿದರು

ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಕಲಾ ವೈಭವದಲ್ಲಿ ಕವಿ ಕಾವ್ಯ ಕುಂಚ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾವ, ಬಣ್ಣ, ಸಂಗೀತದ ಪಲಕು, ಲಯಗಾರಿಕೆ ನಮ್ಮ ಬದುಕಿಗೆ ನಿತ್ಯ ಬೇಕು. ಹಾಗೆ ನೋಡಿದರೆ ನಮಗೆ ಗೊತ್ತಿಲ್ಲದಂತೆ ನಾವು ಸಂಗೀತವನ್ನು ಉಸಿರಾಡುತ್ತಿರುತ್ತೇವೆ. ನಡೆಯುವಾಗ ನಮ್ಮ ಕೈಕಾಲುಗಳ ಚಲನೆಯಲ್ಲೂ ಲಯವಿರುತ್ತೆ. ನಮ್ಮ ಮಾತುಗಳು ಅರ್ಥ ತಪ್ಪಿದಾಗಲೆಲ್ಲ ಅಲ್ಲಿ ಲಯ ತಪ್ಪಿದ್ದನ್ನು ಎದುರಿಗಿದ್ದವರು ಗುರುತಿಸುತ್ತಾರೆ ಎಂದು ತಿಳಿಸಿದರು.

ಕವಿಗೆ ಧ್ಯಾನಸ್ಥ ಸ್ಥಿತಿ ಮುಖ್ಯ. ಬರೆದದ್ದನ್ನು ಮತ್ತೆ ಮತ್ತೆ ಮುರಿದು ಕಟ್ಟುವ ಕುಶಲತೆ ಬೇಕು. ಸಂಗೀತದ ಬಗೆಗೆ ಪ್ರಾಥಮಿಕ ತಿಳುವಳಿಕೆ ಇದ್ದಾಗ ಮಧುರವಾದ ಹಾಡುಗಳನ್ನು ಬರೆಯಲು ಸಾಧ್ಯವಾಗುತ್ತದೆ. ನಾವೀಗ ಭಾವಗೀತೆಗಳ ಲಯ, ಮಟ್ಟುಗಳನ್ನು ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿಕೊಳ್ಳಬೇಕಾದ ಜರೂರು ಇದೆ ಎಂದರು.

ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, 90ರ ದಶಕದ ನಂತರ ಕಾವ್ಯ ಕ್ಷೇತ್ರವು ಅನೇಕ ಪಲ್ಲಟಗಳಿಗೆ ತೆರೆದುಕೊಂಡಿದೆ. ಇತ್ತೀಚಿನ ಬರಹಗಾರರಲ್ಲಿ ಹೊಸ ಸಂವೇದನೆಯ ಕೊರತೆ ಎದ್ದು ಕಾಣುತ್ತದೆ. ಕವಿಗಳು ವರ್ತಮಾನದ ತಲ್ಲಣಗಳಿಗೆ ಮಿಡಿಯುತ್ತಲೇ ಜೀವಪರ ಹಾಗೂ ಮಧುರವಾದ ಕಾವ್ಯಗಳನ್ನು ಕಟ್ಟಿ ಕೊಡಲಿ ಎಂದು ಆಶಿಸಿದರು.

ಕವಿಗಳಾದ ವೀರೇಂದ್ರ ರಾವಿಹಾಳ್, ಎ.ಎರಿಸ್ವಾಮಿ, ಅಂಕಲಿ ಬಸಮ್ಮ,ನಾಗೇಂದ್ರ ಬಂಜಿಗೆರೆ ಮುಂತಾದವರು ಕವನ ವಾಚಿಸಿದರೆ,ಆನಂದ ರೆಡ್ಡಿ, ಗೋವಿಂದ ರೆಡ್ಡಿ, ಸುದರ್ಶನ್,ನರಸಿಂಹಮೂರ್ತಿ ಮುಂತಾದ ಕಲಾವಿದರು ಚಿತ್ರ ಬಿಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net