ಜಿಲ್ಲೆ ರಂಗಭೂಮಿಯ ತವರೂರು

Published on

ಬಳ್ಳಾರಿ ; ರಾಜ್ಯದಲ್ಲಿ ಜಿಲ್ಲೆಯು ರಂಗಭೂಮಿಯ ತವರೂರರಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗಭೂಮಿ ಕಲಾವಿದರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕಲಬುರಗಿ ರಂಗಾಯಣವು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೊಂದಿಕೊಂಡಿದೆ. ಕಲಬುರಗಿ ರಂಗಾಯಣವನ್ನು ಕ.ಕ ಭಾಗದ ಹೋಬಳಿ ಮಟ್ಟದಲ್ಲಿಯೂ ತಲುಪಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲೆಗೆ ಡಾ.ಜೋಳದರಾಶಿ ದೊಡ್ಡನಗೌಡ, ರಾಘವ, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮಾನ್ಸೂರು ಸೇರಿದಂತೆ ಹಲವಾರು ಗಣ್ಯರ ಕೊಡುಗೆ ಅಪಾರವಿದೆ. ಪ್ರಸ್ತುತದಲ್ಲಿ ರಂಗಭೂಮಿಯು ಅಳಿವಿಂಚಿನಲ್ಲಿದೆ. ರಂಗ ಕಲೆಯನ್ನು ಮತ್ತು ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯುವಪೀಳಿಗೆಯು ಸಹ ರಂಗ ಪ್ರವೇಶಿಸಲು ಶಾಲಾ-ಕಾಲೇಜುಗಳಲ್ಲಿ ನಾಟಕ ರಂಗದ ಕುರಿತು ಅರಿವು ಸಂವಾದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಕಲಬುರಗಿ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿನ ರಂಗಕಲಾವಿದರನ್ನು ಜತೆಗೂಡಿಸಿ ರಂಗನಾಟಕ ಉಳಿಯುವಿಕೆ ಮತ್ತು ಬೆಳೆಸುವಿಕೆಗೆ ಅನಿಸಿಕೆ-ಅಭಿಪ್ರಾಯಗಳನ್ನು ಸಂಗ್ರಹಿಸಲು ರಂಗದಂಗಳದಲ್ಲಿ ಮಾತುಕತೆ ಸಭೆ ಏರ್ಪಡಿಸಲಾಗುವುದು. ಕ.ಕ ಭಾಗದಲ್ಲಿ ಇನ್ನು ಹಳೆಯ ನಾಟಕ ಶೈಲಿ ಒಳಗೊಂಡಿದೆ. ಇದನ್ನು ಹೊಸ ಶೈಲಿಗೆ ಅಭಿವೃದ್ಧಿ ಪಡಿಸಬೇಕಿದೆ ಮತ್ತು ಹೊಸ ನಾಟಕಕಾರರನ್ನು ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ರಂಗಾಯಣದಿಂದ ನಾಟಕ ರಚನಾ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ರಂಗಭೂಮಿಯ ಕುರಿತು ಆಸಕ್ತಿ ಮೂಡಿಸಬೇಕಿದೆ. ಶಾಲಾ-ಕಾಲೇಜುಗಳಲ್ಲಿ ನಾಟಕಕಾರರನ್ನು ಕರೆಸಿ ನಾಟಕ ಪ್ರದರ್ಶನ, ನಾಟಕ ಕುರಿತು ಸಂವಾದ ಕಾರ್ಯಕ್ರಮ ಆಯೋಜಿಸುವಂತೆ ಕ್ರಮ ವಹಿಸಲಾಗುವುದು ಎಂದರು.

ಈ ಭಾಗದ ಬಯಲಾಟ, ದೊಡ್ಡಾಟ ಮತ್ತು ತೊಗಲು ಗೊಂಬೆಯಾಟ ರಂಗ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕಲೆ ಕುರಿತು ತರಬೇತಿ ನೀಡಲು, ಕಲೆ ಉಳಿಸಲು ಒಂದು ವಾರದ ಶಿಬಿರ ಆಯೋಜಿಸಲಾಗುವುದು. ಇದರಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರು ಸಹ ಭಾಗವಹಿಸಲು ಒಲವು ತೋರಿಸುತ್ತಿದ್ದು, ಅವರಿಗೂ ಸಹ ಅವಕಾಶ ಕಲ್ಪಿಸಬೇಕಿದೆ ಎಂದರು.

ಬಳಿಕ ರಂಗಭೂಮಿಯಲ್ಲಿ ಪ್ರಸ್ತುತದಲ್ಲಿನ ವಾಸ್ತವತೆ, ಬೆಳವಣಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ರಂಗಕಲಾವಿದರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ರಂಗಕಲಾವಿದರಿಂದ ಸಲಹೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net