ಬಳ್ಳಾರಿ ; ಪ್ರಜಾಪ್ರಭುತ್ವದ ಮೂಲವಾದ ಸಂವಿಧಾನವನ್ನು ರಚಿಸಿ, ರಾಷ್ಟ್ರದಲ್ಲಿ ಅಳವಡಿಸಿಕೊಂಡಿರದಿದ್ದಲ್ಲಿ ಸಾಮಾನ್ಯ ವ್ಯಕ್ತಿಯಾದ ನಾನು ವಿವಿಯ ಕುಲಪತಿ ಹುದ್ದೆಯನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿಎಸ್ ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸುವ ಮಾತನಾಡಿದರು. ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರು ದೇಶವು ಇಂದಿಗೂ ಸುಸ್ಥಿರವಾದ ಅಭಿವೃದ್ಧಿಯನ್ನು ಹೊಂದಿಲ್ಲ. ಭವಿಷ್ಯದಲ್ಲಿ ಭಾರತ ಅಭಿವೃದ್ಧಿ ಹೊಂದಲು ನಮ್ಮಲ್ಲಿರುವ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಯುವಕರು ಸಮೃದ್ಧ ದೇಶವನ್ನು ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು.
ಸರ್ವರಿಗೂ ಉನ್ನತ ಶಿಕ್ಷಣ ಒದಗಿಸುವ ಸಂಕಲ್ಪವನ್ನು ನಮ್ಮ ವಿಶ್ವವಿದ್ಯಾಲಯವು ಮಾಡಿದೆೆ ಎಂದರು. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅಂತರಾಷ್ಟ್ರೀಯ ಕ್ರೀಡಾ ಶಾಲೆಯನ್ನು ನಿರ್ಮಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ಪೌರ ಕಾರ್ಮಿಕರ, ದೇವದಾಸಿಯರ ಹಾಗೂ ತೃತಿಯಲಿಂಗಿ 12 ಅಭ್ಯರ್ಥಿಗಳಿಗೆ ಉಚಿತ ಪ್ರವೇಶವನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಲು ಕೌಶಲ್ಯಭರಿತವಾದ ಸ್ನಾತಕೋತ್ತರ/ಡಿಪ್ಲೋಮ ಕೋರ್ಸ್ಗಳನ್ನು ಆರಂಭಿಸಲಾಗುವುದು. ಸಮಾಜ ವಿಜ್ಞಾನ ಭವನ, ಭಾಷಾ ಭವನ ಕಟ್ಟಡವನ್ನು ನಿರ್ಮಿಸಲಾಗುವುದು. ಆರೋಗ್ಯ ಕೇಂದ್ರ ಮತ್ತು ವಸತಿ ಗೃಹಗಳು ತುರ್ತು ಅಗತ್ಯಗಳಾಗಿದ್ದು ಅವುಗಳನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದರು.
ಬಳಿಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ನೌಕರರಾದ ಸುಮಂಗಲ, ಹಂಪಮ್ಮ, ತಿಪ್ಪಮ್ಮ ಇವರನ್ನು ಸನ್ಮಾನಿಸಲಾಯಿತು.
ರಾಜ್ಯೋತ್ಸವ ದಿನದಂದು ಆಯೋಜಿಸಿದ್ದ ವಿವಿಧ ಸ್ಪರ್ಧೆ ಮತ್ತು ಮೆರವಣಿಗೆಗಳಲ್ಲಿ ವಿಜೇತರಾದ ವಿಭಾಗಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದ ವಿಭಾಗಗಳಿಗೆ ಪ್ರಶಸ್ತಿ ವಿತರಿಸಿದರು. ವಿವಿಧ ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.