ಸಂವಿಧಾನದಿಂದ ದೇಶ ಸದೃಢ

Published on

ಬಳ್ಳಾರಿ ; ಸಂವಿಧಾನದಿಂದ ನಮ್ಮ ದೇಶವು ಸದೃಢವಾಗಿ ನಿಂತಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಹೇಳಿದರು.

ನಗರದ ಬಿಮ್ಸ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದ ರಾಷ್ಟçವಾಗಿದೆ. ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆಗಳು ಇವೆ ಎಂದರೆ ಅದು ಸಂವಿಧಾನ ನಮಗೆ ನೀಡಿರುವ ಕೊಡುಗೆಯಾಗಿದೆ ಎಂದರು.

ಸ್ವಾತಂತ್ರ್ಯ ಮುನ್ನ ಬಹಳ ಕಷ್ಟವಿತ್ತು. ಒಂದು ಸೂಜಿಯನ್ನು ತಯಾರಿಸಲು ಸಾಕಷ್ಟು ಅಡೆ-ತಡೆಗಳು ಎದುರಾಗಿತ್ತಿದ್ದವು. ಸ್ವಾತಂತ್ಯದ ನಂತರ ಸಂವಿಧಾನ ಆಶಯಗಳಿಂದ ಸರ್ಕಾರದ ಮೂಲಕ ಎಲ್ಲವೂ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಈ ಹಿಂದೆ ರಾಜನ ಮಗ ರಾಜ ಆಗುತ್ತಿದ್ದನು. ಆದರೆ ಸಂವಿಧಾನ ಜಾರಿಗೆ ಬಂದ ನಂತರ ಪ್ರತಿಯೊಬ್ಬರೂ ದೇಶ ಆಳುವ ನಾಯಕನಾಗುವ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದ ಸರ್ಕಾರ ರಚಿಸುವ ಮೂಲಕ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇದರಿಂದ ಪಡೆದುಕೊಳ್ಳಬಹುದಾಗಿದೆ.

ನಮ್ಮ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದು, ಸಾಕಷ್ಟು ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣದಿಂದ ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿದೆ. ಬಡ ಕುಟುಂಬದ ಮಕ್ಕಳಿಗೆ ಶಾಲಾ-ಕಾಲೇಜು ಶುಲ್ಕ, ಟ್ಯೂಷನ್ ಫೀಜ್, ದಿನಸಿ ಸಾಮಾನುಗಳು ಖರೀದಿಸಲು ಸಹಾಯವಾಗುತ್ತಿದೆ. ಒಟ್ಟಾರೆಯಾಗಿ ಮಹಿಳಾ ವರ್ಗವು ಸಬಲೀಕರಣದತ್ತ ಸಾಗುತ್ತಿದೆ ಎಂದರು. ರಾಜ್ಯ ಸರ್ಕಾರವು ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗಾಗಿಯೇ ಸಾಕಷ್ಟು ವಿಶೇಷ ಅನುದಾನ ನೀಡುತ್ತಿದೆ. ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದ್ಬಳಕೆಯಾಗಬೇಕು ಎಂದರು.

ಗಣರಾಜ್ಯೋತ್ಸವ ಅಂಗವಾಗಿ ವಿವಿಧ ಇಲಾಖೆ ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಮವಸ್ತ್ರದಲ್ಲಿ ಶಿಸ್ತುಬದ್ದ ಪಥಸಂಚಲನ ನಡೆಯಿತು.

ಬಳಿಕ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಬಳಿಕ ಶಾಲಾ ಶಿಕ್ಷಣ ಇಲಾಖೆಯ ವಿವಿಧ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ನಿಮಿತ್ತ ಸಾಮೂಹಿಕ ನೃತ್ಯ, ದೇಶ ಭಕ್ತಿಗೀತೆ, ಗಾಯನ ಮತ್ತು ವೇಷಧಾರಿಗಳಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಗ್ರೆನೇಟ್ ಕಲ್ಲಿನಲ್ಲಿ ಕೆತ್ತನೆ ಮಾಡಲಾದ 10*7 ಅಡಿಯ “ಭಾರತದ ಸಂವಿಧಾನ ಪೀಠಿಕೆ”ಯನ್ನು ಸಚಿವರು ಅನಾವರಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net