ಸಂಕಷ್ಟದಲ್ಲಿದ್ದ ಟೀಚರ್‌ಗೆ 15 ಲಕ್ಷ ರೂ. ವೆಚ್ಚದ ಮನೆ ಕಟ್ಟಿಸಿಕೊಟ್ಟ ಹಳೇ ಸ್ಟೂಡೆಂಟ್ಸ್

07092020 Bellary Teacher house
Published on

ಬಳ್ಳಾರಿ: ಬದುಕಿನ ಎಲ್ಲ ಹಂತಗಳಲ್ಲೂ ವಿದ್ಯೆ ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಸಾಮಾನ್ಯವಾಗಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ, ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಕೆಲವರು ಮಾತ್ರ ನೆರವಾಗುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಬೋಧನೆ ಮಾಡುತ್ತಿದ್ದ ಶಿಕ್ಷಕಿಯ ಈಗಿನ ದುಸ್ಥಿತಿ ಕಂಡ ಹಳೆಯ ವಿದ್ಯಾರ್ಥಿಗಳು ಅಂದಾಜು 15 ಲಕ್ಷ ರೂ. ವೆಚ್ಚ ಮಾಡಿ ಸುಸಜ್ಜಿತ ಮನೆ ಕಟ್ಟಿಸಿ ಗುರು ಭಕ್ತಿ ಮೆರೆದಿದ್ದಾರೆ.

ಸಿರಗುಪ್ಪದ ಸಿರಗುಪ್ಪ ಎಜುಕೇಷನ್ ಸೊಸೈಟಿಯ ಶಾಲೆಯಲ್ಲಿ ಸುಮಾರು 11 ವರ್ಷ ಕನ್ನಡ ಶಿಕ್ಷಕಿಯಾಗಿದ್ದ ಪರಿಮಳಾ ಇದೀಗ ನಗರದ ಬಂಡಿಹಟ್ಟಿ ಪ್ರದೇಶದ ರಾಮನಗರದಲ್ಲಿ ವಾಸವಾಗಿದ್ದಾರೆ. ನಿವೃತ್ತಿ ಬಳಿಕ ಸೂಕ್ತ ಆದಾಯ ಇಲ್ಲದೆ ಗುಡಿಸಲಿನಂತಹ ಮನೆಯಲ್ಲಿ ವಾಸವಾಗಿದ್ದರು. ಪಾಲಕರಿಲ್ಲದ, ವಿವಾಹವಾಗದ ಶಿಕ್ಷಕಿ ಪರಿಮಳಾ ಅವರಿಗೆ ಅವರ ಅಕ್ಕ ಆಸರೆಯಾಗಿದ್ದರು. ಸಿರಗುಪ್ಪ ಎಜುಕೇಷನ್ ಸೊಸೈಟಿಯ 1993ನೇ ಬ್ಯಾಚಿನ ಎಸ್ಸೆಸ್ಸೆಲ್ಸಿ 2019ರ ಅಕ್ಟೋಬರ್‌ನಲ್ಲಿ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶಿಕ್ಷಕಿ ಪರಿಮಳಾ ಜೀವನಕ್ಕೆ ಹೊಸ ಬೆಳಕು ನೀಡಿದೆ.

1993ನೇ ಬ್ಯಾಚಿನ ವಿದ್ಯಾರ್ಥಿಗಳಲ್ಲಿ ಬಹುತೇಕರು ವೈದ್ಯರು, ಇಂಜಿನಿಯರ್ ಜತೆಗೆ ಇನ್ನಿತರ ಉತ್ತಮ ಸ್ಥಾನದಲ್ಲಿದ್ದಾರೆ. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಎಲ್ಲ ಶಿಕ್ಷಕರ ಮಾಹಿತಿ ಪಡೆದಾಗ ಪರಿಮಳಾ ಅವರು ಸಂಕಷ್ಟದಲ್ಲಿ ಇರುವುದು ತಿಳಿದಿದೆ. ಈ ಕುರಿತು ಶಿಕ್ಷಕಿಯೊಂದಿಗೆ ಚರ್ಚಿಸಿದಾಗ ಮನೆ ಕಟ್ಟಿಸಿಕೊಡುವ ನಿರ್ಧಾಕ್ಕೆ ಬಂದಿದ್ದಾರೆ. ಒಂದು ವರ್ಷದೊಳಗೆ ಮನೆ ನಿರ್ಮಾಣ ಪೂರ್ಣಗೊಳಿಸಿದ್ದಾರೆ. 15 ದಿನಗಳ ಹಿಂದೆ ಗೃಹ ಪ್ರವೇಶ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿಕ್ಷಕಿಯ ಮುಖದಲ್ಲಿ ಮಂದಹಾಸಕ್ಕೆ ಕಾರಣರಾಗಿದ್ದಾರೆ. ಕೆಲವು ಹಳೆಯ ವಿದ್ಯಾರ್ಥಿಗಳು ನಗರದಲ್ಲೇ ವೈದ್ಯರಾಗಿದ್ದಾರೆ. ಶಿಕ್ಷಕಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ.

ಮನೆ ಕಟ್ಟಿಸಿಕೊಡುವ ನಿರ್ಧಾರ ಕೈಗೊಂಡ ಮೂರು ತಿಂಗಳಲ್ಲೇ 15 ಲಕ್ಷ ರೂ. ಸಂಗ್ರಹವಾಯಿತು. ನಮ್ಮ ಬ್ಯಾಚ್ ಜತೆಗೆ ಇತರ ವಿದ್ಯಾರ್ಥಿಗಳು ಕೂಡ ನೆರವಾದರು. ಶಿಕ್ಷಕಿಯ ಆಸೆಯಂತೆ ಮನೆ ನಿರ್ಮಿಸಿ ಕೊಡಲಾಗಿದೆ. 67 ವರ್ಷ ವಯಸ್ಸಿನ ಶಿಕ್ಷಕಿಗೆ ಹಳೆಯ ವಿದ್ಯಾರ್ಥಿ ಬಳಗ ನೆರವಾಗಿದೆ. ಈ ಕೆಲಸ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗಿ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ನೆರವಾದರೆ ಉತ್ತಮ. | ದಮ್ಮೂರು ಚಂದ್ರಶೇಖರ್, ಹಳೆಯ ವಿದ್ಯಾರ್ಥಿ ಸಿರಗುಪ್ಪಟ್ಯೂಷನ್ ಹೇಳಿ ಜೀವನ ಸಾಗಿಸುತ್ತಿದ್ದೆ. ಧ್ವನಿ ಸಮಸ್ಯೆಯಿಂದ ಟ್ಯೂಷನ್ ಕೂಡ ಹೇಳಲಾಗದೆ ಸಂಕಷ್ಟ ಸ್ಥಿತಿಯಲ್ಲಿದ್ದೆ. ಹಳೆಯ ಶಿಷ್ಯರು ಮನೆ ಕಟ್ಟಿಸಿಕೊಡುವುದರ ಜತೆಗೆ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ.| ಪರಿಮಳಾ, ನಿವೃತ್ತ ಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net