ಬಳ್ಳಾರಿ ; ಇತ್ತೀಚಿನ ಆರೋಗ್ಯ ಪದ್ಧತಿ ಹಾಗೂ ಒತ್ತಡ ಕೆಲಸದಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಬಿಡಿಸಿಸಿ ಸಂಸ್ಥೆ ಹಾಗೂ ಬಿಮ್ಸ್ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯು ರಾಜ್ಯದ ಪ್ರತಿಷ್ಠಿತ, ಗೌರವನೀಯ ವಿಶ್ವಾಸರ್ಹ ಸಂಸ್ಥೆಯಾಗಿದೆ. ಜನಸೇವೆಯ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಿದೆ. ಜನರ ಸೇವೆಗಾಗಿ ಸಾಕಷ್ಟು ಕ್ರಿಯಾಶೀಲ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ವ್ಯಾಪಾರ - ವಾಣಿಜ್ಯ ಅಲ್ಲದೆ, ಸಾರ್ವಜನಿಕರೊಂದಿಗೆ ಗುರುತಿಸಿಕೊಳ್ಳಲು ಸಂಸ್ಥೆ ಉತ್ಸುಕವಾಗಿದೆ ಎಂದರು.
ಬಿಮ್ಸ್ ಸೂಪರಿಂಟೆಂಡೆಂಟ್ ಡಾ. ಇಂದುಮತಿ ಮಾತನಾಡಿ, ಬಿಡಿಸಿಸಿ ಸಂಸ್ಥೆಯೊಂದಿಗೆ ಬಿಮ್ಸ್ ಕೂಡ ಜನಸೇವೆ ಮಾಡಲು ಉತ್ಸುಕವಾಗಿದೆ. ಜನಸೇವೆ ಮಾಡುವುದು ಪುಣ್ಯದ ಕೆಲಸ. ಈ ಸೇವೆಯಲ್ಲಿ ಪರಿಣಿತ, ಅನುಭವಿ ವೈದ್ಯರು ಮತ್ತು ಸಿಬ್ಬಂದಿಯು ಪಾಲ್ಗೊಂಡಿದ್ದು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿವಿ ಕುಲಸಚಿವ ಎಸ್.ಎನ್.ರುದ್ರೇಶ್ ಮಾತನಾಡಿ, ಸಂಸ್ಥೆಯು ಸದಾಕಾಲ ಜನಸೇವೆಯಲ್ಲಿ ಮುಂದಿದೆ. ರೈತಣ್ಣನ ಊಟ, ರೈತಣ್ಣನ ಹಾಸಿಗೆ ಮತ್ತು ರೈತಣ್ಣನ ಕ್ಲಿನಿಕ್ ಮೂಲಕ ಸರ್ಕಾರ ಮಾಡುವ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಈ ಸಂಸ್ಥೆಯು ಅನೇಕರಿಗೆ ಸ್ಫೂರ್ತಿ ನೀಡಿದೆ ಎಂದರು. ಬಳಿಕ ಶಿಬಿರದಲ್ಲಿ 250 ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಪಟ್ಟರು.