ಬಳ್ಳಾರಿ ; ಮಾನವನ ದೇಹದ ಪ್ರಮುಖ ಅಂಗ ಮೆದುಳಾಗಿದ್ದು, ಎಲ್ಲರೂ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಶಸ್ತ ಚಿಕಿತ್ಸಕ ಡಾ. ಎನ್.ಬಸರೆಡ್ಡಿ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಎಲ್ಲ ವಯಸ್ಸಿನವರಿಗೂ ಮೆದುಳಿನ ಆರೋಗ್ಯ ಎಂಬ ಘೋಷವಾಕ್ಯದಡಿ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೆದುಳು ದೇಹದ ಅತ್ಯಂತ ಪ್ರಮುಖ ಅಂಗವಾಗಿದೆ. ಮೆದುಳು ಕಾರ್ಯ ನಿರ್ವಹಿಸದಿದ್ದಲ್ಲಿ ಮನುಷ್ಯರು ಪರಾವಲಂಬಿಯಾಗಿ ಬೇರೆಯವರಿಗೆ ಹೊರೆಯಾಗಬೇಕಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಮೆದುಳು ಆರೋಗ್ಯ ಕಾರ್ಯಕ್ರಮದಡಿ 2024ರಿಂದ ಜೂನ್ 2025ನೇ ಸಾಲಿನವರೆಗೂ 19,000 ಫಲಾನುಭವಿಗಳು ಮೆದುಳು ಆರೋಗ್ಯ ಚಿಕಿತ್ಸಾಲಯದಲ್ಲಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಮೆದುಳಿನ ಆರೋಗ್ಯ ಚಿಕಿತ್ಸೆ ನೀಡುವಲ್ಲಿ ಬೇರೆ ಜಿಲ್ಲೆಗಳಿಗಿಂತ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಮೆದುಳನ್ನು ಆರೋಗ್ಯವಾಗಿಡಲು ಸರಳ ದೈನಂದಿನ ಅಭ್ಯಾಸ ಜತೆಯಲ್ಲಿಯೇ ಜೀವನ ಶೈಲಿ ಆಯ್ಕೆ ಬಹಳ ಮುಖ್ಯವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್ ಮಾತನಾಡಿ, ಮೆದುಳು ಆರೋಗ್ಯವಾಗಿರಲು ನಮ್ಮ ದೇಹವು ದೈಹಿಕ ಮತ್ತು ಮಾನಸಿಕ ಸಧೃಡವಾಗಿರಬೇಕು. ಮೆದುಳಿನ ಆರೋಗ್ಯದ ಬಗ್ಗೆ ನಿರ್ಲಕ್ಷೃ ವಹಿಸದೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮೆದುಳು ಆರೋಗ್ಯ ಚಿಕಿತ್ಸಾ ಕೇಂದ್ರದಿಂದ ಆಯೋಜಿಸಿದ್ದ ಮೆದುಳು ಚುರುಕುಗೊಳಿಸುವ ಚಟುವಟಿಕೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.