ಗರ್ಭೀಣಿಯರ ಆರೋಗ್ಯ ಗಮನಹರಿಸಿ

Published on

ಬಳ್ಳಾರಿ : ಜಿಲ್ಲೆಯಲ್ಲಿನ ಗರ್ಭೀಣಿ ಹಾಗೂ ಬಾಣಂತಿಯರ ಆರೋಗ್ಯದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ವಿಶೇಷ ಕಾಳಜಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.

ನಗರದ ನರಸಪ್ಪ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ನಗರ ಹಾಗೂ ಗ್ರಾಮಾಂತರ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನಿಂದಲೂ ಈ ಭಾಗದಲ್ಲಿ ಅಪೌಷ್ಟಿಕತೆ ಸಮಸ್ಯೆ ಇದೆ. ಮಹಿಳೆಯರು ಯಾವ ರೀತಿಯಲ್ಲಿ ಪೌಷ್ಟಿಕ ಆಹಾರ ಸೇವನೆ ಹಾಗೂ ಹೇಗೆ ನೀಡಬೇಕು ಎಂಬುದರ ಕುರಿತು ಈ ಪೋಷಣೆ ಅಭಿಯಾನದಲ್ಲಿ ತಿಳಿಸಿಕೊಡಬೇಕು ಎಂದು ಹೇಳಿದರು.

ಅಭಿಯಾನದ ಉದ್ದೇಶ ಪೌಷ್ಠಿಕತೆ, ಕೈತೋಟದ ನಿರ್ಮಾಣ, ಅಪೌಷ್ಠಿಕ ಮಕ್ಕಳ ಗುರುತಿಸುವಿಕೆ ಮತ್ತು ಮಕ್ಕಳ ಪೂರಕ ಪೌಷ್ಠಿಕತೆಯ ಹಾಗೂ ರಕ್ತ ಹೀನತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಮಾತನಾಡಿ, ಇಂದು ಜೀವನ ಶೈಲಿ ಬದಲಿಸಿಕೊಳ್ಳಬೇಕಿದೆ. ಈ ಯೋಜನೆಯಡಿ ಪೌಷ್ಟಿಕಾಂಶ ಭರಿತ ಆಹಾರ ಸೇವನೆ ಸೇರಿದಂತೆ ಹಲವಾರು ಆರೋಗ್ಯ ಸಲಹೆಗಳನ್ನು ನೀಡಲಾಗುತ್ತದೆ. ಈ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಮಾದರಿ ಜಿಲ್ಲೆ ಮಾಡಲು ಶ್ರಮಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಈ ಬಾರಿಯ ಸುಪೋಷಿತ ಕಿಶೋರಿ, ಸಶಕ್ತ ನಾರಿ ಎಂಬ ಘೋಷವಾಕ್ಯದಂತೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನ ಕೈಗೊಳ್ಳಲಾಯಿತು. ಗರ್ಭೀಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ವಿವಿಧ ಪೌಷ್ಟಿಕಾಂಶ ಭರಿತ ಆಹಾರಗಳ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net