ಬಳ್ಳಾರಿ : ಧಾರ್ಮಿಕ ಆಚರಣೆಗಳಲ್ಲಿ ಜನತೆಯು ಕುಡಿಯಲು ಶುದ್ಧ ನೀರು ಬಳಸಬೇಕು. ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದಂತೆ ಇಲಾಖೆಯ ಜತೆಗೆ ಕೈ ಜೋಡಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.
ತಾಲೂಕಿನ ಕೊರ‌್ಲಗುಂದಿ ಗ್ರಾಮದಲ್ಲಿ ಕುಂಭೋತ್ಸವ ಹಿನ್ನಲೆಯಲ್ಲಿ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಮಾತನಾಡಿದರು. ಜಾತ್ರೆ, ಊರ ಹಬ್ಬ ಮತ್ತು ಧಾರ್ಮಿಕ ಆಚರಣೆಗಳು ಸಮಾಜದ ಭಾಗವಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನ ಸೇರುವುದರಿಂದ ಜನತೆಯು ಕುಡಿಯಲು ಶುಧ್ದ ನೀರು ಬಳಸುವುದು ಹಾಗೂ ಆಹಾರ ಸಿದ್ದಪಡಿಸುವ ಸ್ಥಳದಲ್ಲಿ ಶುಚಿತ್ವ ಕಾಪಾಡುವುದು. ಆಹಾರ ತ್ಯಾಜ್ಯವನ್ನು ಆಯಾ ಗ್ರಾಮ ಪಂಚಾಯಿತಿಯ ನಿರ್ದೇಶನದಂತೆ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರೂ ಹೊಂದಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ ಮಾತನಾಡಿ, ತೆರೆದಿಟ್ಟ ಆಹಾರ ಪದಾರ್ಥ, ರಸ್ತೆಯ ಅಕ್ಕಪಕ್ಕ ಕೊಯ್ದ ಹಣ್ಣು ಹಂಪಲಗಳನ್ನು ತಿನ್ನಬಾರದು. ಶೌಚದ ನಂತರ ಮತ್ತು ಊಟದ ಮೊದಲು ಹಾಗೂ ತಾಯಂದಿರು ಅಡುಗೆ ಮಾಡುವ ಮೊದಲು ತಪ್ಪದೇ ಕೈಗಳನ್ನು ಸಾಬೂನುನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಮಾತನಾಡಿ, ನೀರು ಸರಬರಾಜು ವ್ಯವಸ್ಥೆಯ ಮೂಲ, ನೀರಿನ ಸಂಗ್ರಹಾರಕಗಳು, ನಳಗಳು, ಪೈಪ್‌ಲೈನ್ ಸೇರಿದಂತೆ ಓವರ್‌ಹೆಡ್ ಟ್ಯಾಂಕ್, ಶುದ್ಧ ನೀರಿನ ಘಟಕ ಮುಂತಾದವುಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿ ಶುದ್ದ ಕುಡಿಯುವ ನೀರನ್ನೇ ಸರಬರಾಜು ಮಾಡಲಾಗುತ್ತಿದ್ದು, ಜನರು ಶುದ್ಧೀಕರಿಸಿದ ನೀರು ಕುಡಿಯಲು ಆದ್ಯತೆ ನೀಡಬೇಕು ಎಂದು ವಿವರಿಸಿದರು.