ಬೇಲದಹಣ್ಣಿನ ಕೃಷಿಯಿಂದ ಜೀವನವೂ ಸಿಹಿ

Beladahannu
Published on

| ಅಶೋಕ ನೀಮಕರ್ ಬಳ್ಳಾರಿ

ಅರಣ್ಯ ಬೆಳೆಗಳ ಕೃಷಿಯಿಂದ ಖರ್ಚಿಲ್ಲದೆ ಲಾಭ ಪಡೆಯಬಹುದು ಎಂಬುದನ್ನು ನಿರೂಪಿಸಿದವರು ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದ ವಿಶ್ವೇಶ್ವರ ಸಜ್ಜನ್. ಎಂ.ಎ. ಓದಿದ ಬಳಿಕ ಸಜ್ಜನ್ ಉದ್ಯೋಗಕ್ಕೆ ಪ್ರಯತ್ನಿಸದೆ ನೇರವಾಗಿ ಊರಿಗೆ ತೆರಳಿ ಕೃಷಿಯಲ್ಲಿ ತೊಡಗಿದರು. 1.5 ಎಕರೆ ಜಮೀನಿನಲ್ಲಿ ತೆಂಗಿನ ಮರ ಹಾಗೂ ಬೇಲದ ಹಣ್ಣಿನ ಗಿಡಗಳಿದ್ದವು. ಬರಗಾಲದಿಂದಾಗಿ ತೆಂಗಿನ ಮರಗಳು ನಾಶವಾಗಿ ಬೇಲದಹಣ್ಣಿನ ಗಿಡಗಳು ಮಾತ್ರ ಉಳಿದಿದ್ದವು. ಬಳಿಕ ಮಲ್ಲಿಗೆ ಹೂವಿನ ಕೃಷಿ ಆರಂಭಿಸಿದರು. ನಂತರದಲ್ಲಿ ಮಲ್ಲಿಗೆ ಬೆಳೆ ಕೈಬಿಟ್ಟು ಬೇಲದ ಹಣ್ಣು, ನೇರಳೆ, ಬೆಟ್ಟದ ನೆಲ್ಲಿ, ಹುಣಸೆ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಂಡಿದ್ದು ಇದುವರೆಗೆ ಹಿಂದಿರುಗಿ ನೋಡಿಲ್ಲ.

ಏಳು ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಪ್ರಸ್ತುತ 150 ಬೇಲದ ಹಣ್ಣು, 30 ನೇರಳೆ, 10 ಹುಣಸೆ ಹಾಗೂ ಬೆಟ್ಟದ ನೆಲ್ಲಿ ಗಿಡಗಳನ್ನು ಹೊಂದಿದ್ದಾರೆ. 2010ರಲ್ಲಿ ಬೇಲದ ಹಣ್ಣಿನ ಜ್ಯೂಸ್ ಮೂಲಕ ಆರಂಭವಾದ ಮೌಲ್ಯವರ್ಧನೆ ಇದೀಗ ಬೇಲದ ಹಣ್ಣಿನ ಪೌಡರ್, ಜಾಮ್ ಬರ್ಫಿವರೆಗೆ ಮುಂದುವರಿದಿದೆ. ನೇರಳೆ ಹಣ್ಣಿನ ಜಾಮ್ ಹುಣಸೆ, ಬೆಟ್ಟದ ನೆಲ್ಲಿ ತೊಕ್ಕು ಕೂಡ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಹಸು ಸಾಕಾಣಿಕೆ: 15 ಗೀರ್ ತಳಿಯ ಹಸುಗಳನ್ನು ಸಾಕಿದ್ದಾರೆ. ಹಾಲಿಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬ ಕಾರಣಕ್ಕೆ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದು ತುಂಬಾ ಬೇಡಿಕೆ ಇದೆ. ಗೋಮೂತ್ರದಿಂದ ಆರ್ಕ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮೂವರಿಗೆ ಕೆಲಸ ನೀಡಿದ್ದಾರೆ. ಮಾಸಿಕ ಒಂದು ಲಕ್ಷ ರೂ. ವಹಿವಾಟು ಹೊಂದಿದ್ದಾರೆ. ಸಜ್ಜನ್ ಅವರ ಪುತ್ರರು ನರ್ಸರಿ ಆರಂಭಿಸಿದ್ದು ತೋಟಗಾರಿಕೆ, ಅಲಂಕಾರಿಕ, ಹಣ್ಣು ಹಾಗೂ ಅರಣ್ಯ ಕೃಷಿಗೆ ಸಂಬಂಧಿಸಿದ ಸಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಜ್ಜನ್​ರಿಗೆ ಕಳೆದ ಸಾಲಿನಲ್ಲಿ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.

ಅರಣ್ಯ ಕೃಷಿಯಲ್ಲಿ ವೆಚ್ಚ ಕಡಿಮೆ. ಔಷಧೀಯ ಗುಣಗಳಿರುವ ಬೇಲದ ಹಣ್ಣಿನ ಕೃಷಿಯಲ್ಲಿ ಒಂದು ಎಕರೆಗೆ ವರ್ಷದಲ್ಲಿ ಎರಡು ಲಕ್ಷ ರೂ. ಆದಾಯ ಇದೆ. ಒಂದು ಬೇಲದ ಮರದ ಆಯುಷ್ಯ ಸುಮಾರು 200 ವರ್ಷ ಇದೆ. | ವಿಶ್ವೇಶ್ವರ ಸಜ್ಜನ್ ಅರಣ್ಯ ಬೆಳೆಗಳ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net