ಸರ್ವೇ ನಕ್ಷೆ ಮನೆ ಬಾಗಲಿಗೆ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಹೇಳಿಕೆ

Maruthi Prasad Buda President
ಮಾರತಿ ಪ್ರದಾಸ್, ಬುಡಾ ಅಧ್ಯಕ್ಷ.
Published on

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕರು ಬುಡಾದ ಸರ್ವೇ ನಕ್ಷೆಗಾಗಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ಏಳು ದಿನಗಳೂಳೆಗೆ ಪೋಸ್ಟ್ ಮೂಲಕ ಮನೆಗೆ ತಲುಪಿಸಲಾಗುವುದು ಎಂದು ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ನಕ್ಷೆಯನ್ನು ಮನೆಗೆ ಮನೆಗೆ ತಲುಪಿಸುವ ಬಗ್ಗೆ ನಗರ ಶಾಸಕ, ಬುಡಾ ಸದಸ್ಯರು ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಇದರಿಂದ ಸಾರ್ವಜನಿಕರು ಕಚೇರಿಗೆ ಅಲೆದಾಡುವುದು ತಪ್ಪಲಿದೆ. ಈ ಮುಂಚೆ 500 ರೂ. ಶುಲ್ಕ ಪಾವತಿಸಿಕೊಂಡು ಸರ್ವೇ ನಕ್ಷೆ ನೀಡಲಾಗುತ್ತಿತ್ತು. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ 200 ರೂ. ಕಡಿತಗೊಳಿಸಿ, 300 ರೂ. ಪಾವತಿಸಿಕೊಂಡು ಮನೆ ಮನೆಗೆ ಸರ್ವೆ ನಕ್ಷೆಯನ್ನು ತಲುಪಿಸಲಾಗುವುದು ಎಂದರು.

ಇಲ್ಲಿನ ಎಸ್‌ಎನ್ ಪೇಟೆಯಲ್ಲಿ ಇತ್ತೀಚೆಗೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಅದನ್ನು ನಿಯಂತ್ರಿಸಲು ಬುಡಾದ ಮೂಲಕ ವೃತ್ತ ವಿಸ್ತರಣೆ ಮಾಡಲು ನಿರ್ಧರಿಸಿದೆ. ಇದರಂತೆ ಮುಂದಿನ ದಿನಗಳಲ್ಲಿ ನಗರದ ವಿವಿಧ ವೃತ್ತಗಳನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ. ನಗರದಲ್ಲಿ ಉದ್ಯಾನ ಒತ್ತುವರಿ ಬಗ್ಗೆ ಪ್ರತಿಕ್ರಿಯಿಸಿ, ಅವುಗಳ ನಿರ್ವಹಣೆ ಮಹಾನಗರಪಾಲಿಕೆಗೆ ವಹಿಸಲಾಗಿದೆ. ಒತ್ತುವರಿ ಬಗ್ಗೆ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಹೊಸಪೇಟೆಯಲ್ಲಿ ಫ್ಲೋರೊ ಏರಿಯಾ ರೇಶಿಯೊ(ಎಫ್‌ಎಆರ್) ಹೆಚ್ಚಿದ್ದು, ಜಿಲ್ಲೆಯಲ್ಲಿ ಕೂಡ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದುರ್ಗಮ್ಮ ಗುಡಿಯ ಕೆಳ ಸೇತುವೆ ಅಗಲೀಕರಣ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು. ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಬುಡಾ ಕೈಗೆತ್ತಿಕೊಳ್ಳಲಿದೆ ಎಂದರು. ಪಾಲಿಕೆ ಸದಸ್ಯ ಪಿ.ಗಾದೆಪ್ಪ, ವೀರಶೇಖರರೆಡ್ಡಿ, ನಿರ್ದೇಶಕ ನೀಲಕಂಠಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net