ಬಳ್ಳಾರಿ, ರೆಡ್ಡಿ ಹೇಳಿಕೆಗೆ ಬೆಂಬಲಿಗರ ಖಂಡನೆ

Published on

ಬಳ್ಳಾರಿ : ಮಾಜಿ ಸಚಿವ, ಶಾಸಕ ನಾಗೇಂದ್ರರನ್ನು ಡಸ್ಟ್ ಬಿನ್ ಎಂದಿರುವ ಶಾಸಕ ಜನಾರ್ದನರೆಡ್ಡಿ ಹೇಳಿಕೆ ಖಂಡನೀಯ ಎಂದು ಜಿಪಂ ಮಾಜಿ‌ ಸದಸ್ಯ ಎ. ಮಾನಯ್ಯ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು. ರೆಡ್ಡಿ ಡಸ್ಟ್ ಬಿನ್ ಎಂದಿರುವ ಶಾಸಕ ಬಿ.ನಾಗೇಂದ್ರ ಈ ಮೊದಲು ಅವರೊಂದಿಗೆ ಇದ್ದರು. ಆಗ ಅವರಿಗೆ ಗೊತ್ತಾಗಲಿಲ್ಲವೇ ? ಎಂದು ಪ್ರಶ್ನಿಸಿದರು. ನಾಗೇಂದ್ರ ನಿಂದಿಸಿದರೆ ಎಸ್ಟಿ ಸಮುದಾಯವನ್ನು ಅವಮಾನಿಸಿದಂತಾಗಿದೆ‌. ವಾಕ್ ಸ್ವಾತಂತ್ರ್ಯವಿದೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ರೆಡ್ಡಿ ಈಗ ಒಮ್ಮೆ ಶಾಸಕರಾಗಿದ್ದಾರೆ. ನಾಗೇಂದ್ರ ಸತತ ನಾಲ್ಕು ಬಾರಿ ಶಾಸಕರಾಗಿ, ಒಮ್ಮೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಎಸ್ ಟಿ ಸಮುದಾಯದ ದೊಡ್ಡ ನಾಯಕರೂ ಆಗಿದ್ದಾರೆ. ಅಂತಹವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಮುಂದುವರೆದರೆ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ರೆಡ್ಡಿ ಮಾತನಾಡುವುದನ್ನೆ ಬಂಡವಾಳವನ್ನಾಗಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ನಾಯಕರ ಬಗ್ಗೆ ಮಾತನಾಡೋದೇ ಅವರ ಕೆಲಸ. ಅವರು ಸಹ ಬಳ್ಳಾರಿಯಲ್ಲಿ ಎನ್ನೋಬಲ್ ಇಂಡಿಯಾ ಸಂಸ್ಥೆಯಲ್ಲಿ ಏನೇನಾಗಿದೆ ಎಂಬದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು. ಸಾರ್ವಜನಿಕವಾಗಿ ಹೇಗಿರಬೇಕು, ಏನು, ಎಷ್ಟು ಮಾತನಾಡಬೇಕು ಎಂಬ ಅರಿವು ರೆಡ್ಡಿಗೆ ಇರಬೇಕು. ನಿಮ್ಮನ್ನು ಸಹ ಬಿಜೆಪಿಯವರು ಡಸ್ಟ್ ಬಿನ್ ನಲ್ಲಿ ಇಟ್ಟಿದ್ದರು. ಕೆಆರ್ ಪಿಪಿ ಕಟ್ಟಿದ್ದ ನೀವು ಪುನಃ ಬಿಜೆಪಿ ಪಕ್ಷವನ್ನು ಏಕೆ ಸೇರಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದಿಟ್ಟುಕೊಂಡು ಮಾತನಾಡಿ ಎಂದು ಎಚ್ಚರಿಸಿದರು.

ಪ್ರಮುಖರಾದ ಎಲ್.ಮಾರೆಣ್ಣ, ಎರಕುಲಸ್ವಾಮಿ, ಪರಶುರಾಮ್, ಚಿದಾನಂದಪ್ಪ, ವಿ.ಕೆ.ಬಸಪ್ಪ, ಜಗನ್ನಾಥ್, ಡಾ.ಪಿ.ಎಲ್.ಗಾದಿಲಿಂಗನಗೌಡ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net