ಬಳ್ಳಾರಿ : ಮಕ್ಕಳು ದುಶ್ಚಟಗಳಿಂದ ದೂರವಿರಬೇಕು ಎಂದು ಸಿದ್ದಯ್ಯನ ಕೋಟೆಯ ವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಮಹಾಸ್ವಾಮಿ ಚಿತ್ತರಗಿ ಹೇಳಿದರು.
ನಗರದ ಸರ್ಕಾರಿ (ಮಾಜಿ ಪುರಸಭೆ) ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ಬದುಕಿಗೆ ಶರಣರ ಚಿಂತನೆಗಳು ಎಂಬ ವಿಷಯ ಕುರಿತು ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುಟ್ಕಾ, ತಂಬಾಕು, ಮದ್ಯಪಾನ ಇವುಗಳಿಂದ ದೂರವಿರಬೇಕು. ಇವು ಆರೋಗ್ಯ ಮತ್ತು ಜೀವನ ಹಾಳು ಮಾಡುತ್ತವೆ. ಬಸವಣ್ಣನವರ ವಚನಗಳನ್ನು ಅಧ್ಯಯನ ಮಾಡಿ, ಆದರ್ಶ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಜಯ ಮಹಾಂತೇಶ್ವರ ಶಾಖಾಮಠದ ಕಾರ್ಯದರ್ಶಿ ಕಾಂತರಾಜ್ ಮಾತನಾಡಿ, ಪೂಜ್ಯರು ರಾಜ್ಯದ ಹಲವಾರು ಜಿಲ್ಲೆಗಳಲ್ಲಿರುವ ಶಾಲಾ-ಕಾಲೇಜುಗಳಿಗೆ ಹೋಗಿ ಮಕ್ಕಳ ಬದುಕಿಗೆ ದಾರಿದೀಪವಾಗುವ ಉಪನ್ಯಾಸ ನೀಡುವ ಮೂಲಕ ಮಕ್ಕಳ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಕೆ.ಸುಂಕಪ್ಪ ಮಾತನಾಡಿ, ಇಂದಿನ ಮಕ್ಕಳು ಮಹಾನ್ ದಾರ್ಶನಿಕರ ಜೀವನದ ಶೈಲಿ ಆಳವಡಿಸಿಕೊಳ್ಳಬೇಕು. ಪಠ್ಯದ ಜತೆಗೆ ಆಧ್ಯಾತ್ಮಿಕ ಚಿಂತನೆಗಳ ಉಪನ್ಯಾಸಗಳು ವಿದ್ಯಾರ್ಥಿಗಳ ಬದುಕನ್ನು ಹಸನಾಗಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.