ಬಳ್ಳಾರಿ : ವಿದ್ಯೆ ಜತೆಯಲ್ಲಿ ವಿದ್ಯಾರ್ಥಿಗಳು ಕಲಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಯುವ ಸೌರಭ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಬಹಳ ಮುಖ್ಯ. ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತವಾಗಿರಬಾರದು. ತಮ್ಮಲ್ಲಿನ ಕಲಾ ಪ್ರತಿಭೆಗಳನ್ನು ಹೊರಹಾಕಬೇಕು. ಸಾಂಸ್ಕೃತಿಕವಾಗಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಒತ್ತಡ ಜೀವನದಲ್ಲಿ ಕಲೆಯು ನೆಮ್ಮದಿಯ ಪಾಠ ಕಲಿಸುತ್ತದೆ. ಕಲಾಭ್ಯಾಸಕ್ಕೆ ವಿವಿಯಲ್ಲಿ ನಾಟಕ ವಿಭಾಗವಿದ್ದು, ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ಬೋಧನೆ ಮಾಡುವ ಕೆಲಸವಾಗುತ್ತಿದೆ. ವಿವಿಯಲ್ಲಿ ಸುಸಜ್ಜಿತ ಆಡಿಟೋರಿಯಂ ಹಾಲ್ ನಿರ್ಮಾಣ ಕುರಿತಂತೆ ಸಚಿವರೊಂದಿಗೆ ಚರ್ಚಿಸಲಾಗುವುದು. ಗುಣಮಟ್ಟದ ಕಟ್ಟಡ ನಿರ್ಮಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳು : ಬಳಿಕ ಕಾರ್ಯಕ್ರಮದಲ್ಲಿ ಕಂಪ್ಲಿ ಎಮ್ಮಿಗನೂರಿನ ಜ್ಞಾನೇಶ್ವರ ತಂಡದಿಂದ ಸುಗಮ ಸಂಗೀತ, ಬಳ್ಳಾರಿಯ ನಟರಾಜ ಕುಚುಪುಡಿ ನೃತ್ಯ-ಸಂಗೀತ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ಸಂಡೂರು ತಾಲೂಕಿನ ವಿ.ನಾಗಲಾಪುರದ ಎಚ್.ಶರಣಬಸವ ಅವರ ಜಾನಪದ ಗೀತೆ, ಸಿರಿಗೇರಿಯ ಎನ್.ಮಣಿಕಂಠ ಸಂಗಡಿಗರಿಂದ ಬಯಲಾಟ(ಭಾರ್ಗವ ರಾಮ), ಬಳ್ಳಾರಿಯ ಎಂ.ಎಸ್.ಹರ್ಷ ತಂಡದಿಂದ ತಾಷರಂಡೋಲ್, ಸಂಡೂರು ತಾಲೂಕಿನ ಎಂ.ಬಸಾಪುರದ ಆರ್.ನಾಗರಾಜ ತಂಡದಿಂದ ಡೊಳ್ಳು ಕುಣಿತ ಸೇರಿದಂತೆ ಇತರೆ ವೈವಿಧಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.