ಸಮಾಜದ ಅಭಿವೃದ್ಧಿಗೆ ಶ್ರಮಿಸಿ

Published on

ಬಳ್ಳಾರಿ : ಬಡವ‌ಬಲ್ಲಿದರ ನೆರವಿಗೆ ನಿಂತು, ನ್ಯಾಯದ ರಕ್ಷಣೆ ಮಾಡುವವನೇ ನಿಜವಾದ ರೆಡ್ಡಿ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ರೆಡ್ಡಿ ಜನ ಸಂಘ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸೇವೆಗೆ ಬರಲು ನಿಮ್ಮೆಲ್ಲರ ಆಶೀರ್ವಾದಿಂದ, ಶಾಸಕನಾಗಿರುವೆ. ಕುಟುಂಬದ ಹಿರಿಯರು ಸಾಕಷ್ಟು ಕಷ್ಟ ಅನುಭವಿಸಿ, ಬದುಕು ಕಟ್ಟಿಕೊಳ್ಳುತ್ತ ಜನಸೇವೆ ಮಾಡಿದ್ದಾರೆ ಎಂದರು.

ಸಮಾಜದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕೆಲಸ ಮಾಡೋಣ, ರೆಡ್ಡಿ ಸಮಾಜದ ಹಲವು ಮುಖಂಡರು ಬೇರೆ ಬೇರೆ ಪಕ್ಷಗಳಲ್ಲಿ ಇದ್ದರೂ ರೆಡ್ಡಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಿದೆ. ಸಮಾಜದ ವಿಷಯ ಬಂದಾಗ ಎಲ್ಲ ಭೇದ ಮರೆತು ಒಂದಾಗಬೇಕು ಎಂದರು.

ರೆಡ್ಡಿ ಸಮುದಾಯದಲ್ಲಿ ಬಡವರೇ ಇಲ್ಲ ಎಂಬುದು ಸುಳ್ಳು, ನಮ್ಮಲ್ಲೂ ಬಡವರಿದ್ದಾರೆ, ಅಂಥವರ ಕಲ್ಯಾಣಕ್ಕಾಗಿ ಶ್ರಮಿಸೋಣ, ವಿಶೇಷವಾಗಿ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡೋಣ ಎಂದರು.

ಯುವ ಜನಾಂಗದ ಅಭಿವೃದ್ಧಿಗಾಗಿ ನಮ್ಮ ಹಿರಿಯರು ಹಲವು ಕನಸು ಕಂಡಿದ್ದಾರೆ, ಅವುಗಳನ್ನು ಸಾಕಾರಗೊಳಿಸೋಣ ಎಂದು ಕಿವಿ ಮಾತು ಹೇಳಿದರು.

ರೆಡ್ಡಿ ಜನಸಂಘ ವತಿಯಿಂದ ನಿರ್ಮಾಣ ಹಂತದಲ್ಲಿರುವ ರೆಡ್ಡಿ ಭವನದ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಂಡು ಅದ್ಧೂರಿಯಾಗಿ ಉದ್ಘಾಟಿಸಲಾಗುವುದು, ಕಳೆದ ವರ್ಷ ಕೊಟ್ಟ ಮಾತಿನಂತೆ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡುವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net