ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳ ಹಿಂದಯೇ ಸಿದ್ಧವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಗಡಿಯಾರ ಗೋಪುರ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಕಾಣುತ್ತಿದೆ.
ಇಲ್ಲಿನ ಗಡಗಿ ಚೆನ್ನಪ್ಪ ವೃತ್ತದಲ್ಲಿ ಕಳೆದ ಎರಡು ವರ್ಷಗಳ ಹಿಂದಯೇ ಆರಂಭವಾದ ಗಡಿಯಾರ ಗೋಪುರ ಕಾಮಗಾರಿಯು ಪೂರ್ಣಗೊಂಡಿದೆ. ಅಲ್ಲದೆ, ಕಳೆದ ನವೆಂಬರ್ ತಿಂಗಳಲ್ಲಿಯೇ ಉದ್ಘಾಟಿಸಲಾಗುವುದು ಎಂಬುದಾಗಿ ಜಿಲ್ಲಾಡಳಿತದಿಂದ ಪ್ರಕಟಣೆ ಹೊರಡಿಸಲಾಗಿತ್ತು. ಸಂಡೂರು ವಿಧಾನಸಭಾ ಉಪಚುನಾವಣೆಯ ಹಿನ್ನಲೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಮುಂದೂಡಲಾಯಿತು. ನೀತಿ ಸಂಹಿತೆ ತೆಗೆದು ಹಲವು ದಿನಗಳೆ ಕಳೆದರೂ ಈವರೆಗೂ ಗೋಪುರದ ಉದ್ಘಾಟನೆಗೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಗಡಿಯಾರ ಗೋಪುರ ಕಾಮಗಾರಿ ಆರಂಭವಾಗಿನಿಂದ ವಾಹನ ಸವಾರರು ನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಎದುರಿಸುತ್ತಿದ್ದಾರೆ. ಗೋಪುರ ಉದ್ಘಾಟನೆಯಾದರೆ ವೃತ್ತ ಅಗಲೀಕರಣದಿಂದ ಟ್ರಾಫಿಕ್ ಸಮಸ್ಯೆ ತಪ್ಪಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ
ಅನಾವರಣಗೊಳ್ಳದ ರಾಯಣ್ಣ ಪ್ರತಿಮೆ : ನಗರದ ಜೋಳದರಾಶಿ ಡಾ. ದೊಡ್ಡನಗೌಡ ರಂಗಮಂದಿರದ ವೃತ್ತದ ಬಳಿ ನಿರ್ಮಾಣವಾಗಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆಯು ಅನಾವರಣಗೊಳಿಸದೆ ಕಳೆದ ಕೆಲ ವರ್ಷಗಳಿಂದ ಕಾಗದದಿಂದ ಮುಚ್ಚಲಾಗಿದೆ. 2023ರ ವಿಧಾನಸಭಾ ಚುನಾವಣೆಗೆ ಮುನ್ನವೇ ನಿರ್ಮಿಸಿದ್ದ ರಾಯಣ್ಣ ಪ್ರತಿಮೆಯು ರಾಜಕೀಯ ಪಕ್ಷಗಳ ಮುಖಂಡರ ಪ್ರತಿಷ್ಠೆಯಿಂದ ಅನಾವರಣಗೊಳ್ಳದೆ ಮುಂದೂಡುತ್ತಿದೆ. ಪ್ರತಿಮೆ ನಿರ್ಮಾಣವಾದ ವೇಳೆ ವಿಧಾನಸಭಾ ಚುನಾವಣೆಯ ಹಿನ್ನಲೆ ಮುಂದೂಡಲಾಯಿತು. ಆದರೆ, ವಿಧಾನಸಭಾ, ಲೋಕಸಭಾ ಹಾಗೂ ಉಪ ಚುನಾವಣೆಯೆ ನಡೆದರೂ ಈವರೆಗೂ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಆಸಕ್ತಿ ಏಕೆ ತೋರುತ್ತಿಲ್ಲ ಎಂಬುದು ಸಮುದಾಯದ ಪ್ರಶ್ನೆಯಾಗಿದೆ. ಅಲ್ಲದೆ, ಇತ್ತೀಚೆಗೆ ಕನಕ ಜಯಂತಿ ದಿನದಂದು ಸಮುದಾಯದ ಕೆಲವರು ಏಕಾಏಕಿ ಪ್ರತಿಮೆ ಅನಾವರಣಗೊಳಿಸಿದ್ದರು. ಜಿಲ್ಲಾಡಳಿತದ ಅನುಮತಿಯಿಲ್ಲದೆ ಅನಾವರಣಗೊಳಿಸಿದ್ದ ಪ್ರತಿಮೆಗೆ ಸಂಸದ ಈ.ತುಕಾರಾಮ್, ಮಾಜಿ ಸಚಿವ ಶ್ರೀರಾಮುಲು ಮಾಲಾರ್ಪಣೆ ಮಾಡಿದ್ದು ವಿವಾದ ಸೃಷ್ಠಿಯಾಗಿತ್ತು. ಕಾರ್ಯಕ್ರಮ ದಿನದಂದೇ ಪ್ರತಿಮೆ ಅನಾವರಣದ ಬಗ್ಗೆ ಶಾಸಕರೆ ಎದುರೆ ವಾಗ್ವದ ನಡೆದು ಪ್ರಸಂಗವು ನಡೆಯಿತು.
ಜನರಿಗೆ ಸಿಗದ ಜಿಲ್ಲಾ ಉಸ್ತುವಾರಿ ಸಚಿವ : ಮಾಜಿ ಸಚಿವ ಬಿ.ನಾಗೇಂದ್ರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ನೇಮಿಸಲಾಯಿತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಎರಡ್ಮೂರು ಸಭೆ ಕರೆದಿದ್ದು ಬಿಟ್ಟರೆ ಉಳಿದಲ್ಲೆ ಬಾರಿ ಜಿಲ್ಲೆಯ ಮುಖ ಕೂಡ ಹಾಕಿಲ್ಲ. ಇತ್ತೀಚೆಗೆ ನಗರದ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ನಲ್ಲಿ ಐವರು ಬಾಣಂತಿಯರ ಮೃತಪಟ್ಟರೂ ಕೂಡ ಕೇವಲ ಅಪ್ತ ಕಾರ್ಯದರ್ಶಿ ಮೂಲಕ ಡಿಸಿಯಿಂದ ಮಾಹಿತಿ ತರಿಸಿಕೊಳ್ಳುವುದು ಬಿಟ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಲಿಲ್ಲ. ಅಲ್ಲದೆ, ಮೃತರ ಕುಟುಂಬಗಳಿಗೆ ಸ್ವಾಂತನವೂ ಕೂಡ ಹೇಳಲಿಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳ ಕಿವಿ ಹಿಂಡುವ ಕೆಲಸ ಮಾಡಿದರು. ಮುತಾವರ್ಜಿ ವಹಿಸಿಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ನಮಗೆ ಏನು ಸಂಬಂಧವಿಲ್ಲ ಎಂಬಂತೆ ಇರುವುದು ಆಶ್ಚರ್ಯವಾಗಿದೆ. ಇತ್ತೀಚೆಗೆ ಅಕಾಲಿಕ ಮಳೆಯಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕ್ಕೆ ಉರುಳಿತು. ಅಲ್ಲದೆ, ಮೆಣಸಿನಕಾಯಿ ಬೆಳೆಗೆ ಟ್ರೀಪ್ಸ್ ಹಾಗೂ ಕೀಟಭಾಧೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಮೀನುಗಳಿಗೆ ಭೇಟಿ ನೀಡಿ ಪರಿಹಾರದ ಬಗ್ಗೆ ಸರ್ಕಾರದ ಗಮನ ತರಬೇಕಾಗಿದ್ದ ಸಚಿವರು ಮಾತ್ರ ಜಿಲ್ಲೆಯಲ್ಲಿ ಏನು ನಡೆದಿಲ್ಲ ಎಂಬಂತೆ ಬೆಂಗಳೂರಿನ ಕಚೇರಿಯಲ್ಲಿ ಉಳಿದುಕೊಂಡಿದ್ದಾರೆ. ನಗರದ ಕನಕ ದುರ್ಗಮ್ಮ ಕೆಳ ಸೇತುವೆ, ಸುಧಾ ಕ್ರಾಸ್ ಮೇಲ ಸೇತುವೆ ದುರಸ್ತಿ ಕಾರ್ಯದಿಂದ ವಾಹನ ಸವಾರರು ನಗರದಲ್ಲಿ ಸಂಚಾರಿಸಲು ಪರದಾಡುತ್ತಿದ್ದಾರೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ಹಾಗೂ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕಿದ್ದ ಸಚಿವರು ಮಾತ್ರ ಜನರಿಗೆ ಸಿಗುತ್ತಿಲ್ಲ ಎಂಬ ಚರ್ಚೆ ಜೋರಾಗಿದೆ.
ಕೋಟ್... ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಬಂದ ಕೂಡಲೇ ಅನಾವರಣಗೊಳಿಸಲಾಗುವುದು.
- ಖಲೀಲ್ ಸಾಬ್, ಆಯುಕ್ತ, ಮಹಾನಗರ ಪಾಲಿಕೆ, ಬಳ್ಳಾರಿ.
ಕೋಟ್.... ಗಡಿಯಾರದ ಗೋಪುರ ಕಾಮಗಾರಿಯು ಪೂರ್ಣಗೊಂಡಿದೆ. ಉದ್ಘಾಟನೆಗೆ ಜಿಲ್ಲೆಯ ಎಲ್ಲ ಶಾಸಕರ ಜತೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು.
- ಹೇಮರಾಜ್, ಕಾರ್ಯನಿರ್ವಾಹಕ ಅಭಿಯಂತರರು, ಪಿಡಬ್ಲೂಡಿ, ಬಳ್ಳಾರಿ.