

ಬಳ್ಳಾರಿ: ವೈಯಕ್ತಿಕ ಸಾಲ ತೀರಿಸಲು ಬ್ಯಾಂಕ್ ಸಾಲ ಹಾಗೂ ಸಾಲ ಮನ್ನಾ ಮಾಡುವ ಸರ್ಕಾರದ ಭರವಸೆ ಹುಸಿಯಾದರೆ ರೈತರು ಅನುಭವಿಸುವ ಕಷ್ಟಗಳೇನು ಎಂಬುದಕ್ಕೆ ಕನ್ನಡಿಯಂತಿತ್ತು ಮೈಸೂರಿನ ಗೋಪಾಲಸ್ವಾಮಿ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಂಜೀವಿನಿ ನಾಟಕ.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗತೋರಣದಿಂದ ಆಯೋಜಿಸಿರುವ 13ನೇ ರಾಜ್ಯ ವಿದ್ಯಾರ್ಥಿ ನಾಟಕೋತ್ಸವದಲ್ಲಿ ಶನಿವಾರ ಪ್ರದರ್ಶನಗೊಂಡ ಸಂಜೀವಿನಿ ನಾಟಕ ಕೃಷಿ ಕೇಂದ್ರಿತ ಸಾಮಾಜಿಕ ವ್ಯವಸ್ಥೆಯನ್ನು ಅನಾವರಣ ಮಾಡಿತು.
ನಾಟಕದ ಪ್ರಮುಖ ಪಾತ್ರಧಾರಿಗಳಾದ ಕಾಳಪ್ಪ, ಕಾಳಕ್ಕ ದಂಪತಿ ಇಡೀ ರೈತ ಸಮುದಾಯದ ಪ್ರತಿನಿಧಿಯಂತಿದ್ದರು. ಕೈ ಸಾಲ ತೀರಿಸುವುದರ ಜತೆಗೆ ಕಾಳಕ್ಕ ಹೊಂದಿದ ಸ್ವಲ್ಪ ಮಟ್ಟಿಗಿನ ಆಸೆ, ಆಕಾಂಕ್ಷೆ ಹಾಗೂ ಸರ್ಕಾರದ ಸಾಲ ಮನ್ನಾ ಮಾಡುವ ಭರವಸೆ ಕಾಳಪ್ಪನನ್ನು ಜಮೀನು ಅಡಮಾನ ಹಾಗೂ ಕೃಷಿ ಸಾಲಕ್ಕೆ ಪ್ರೇರೇಪಿಸುತ್ತವೆ. ಸಾಲ ತೀರಿಸಲಾಗುವುದಿಲ್ಲ. ಜೀವನಕ್ಕೆ ಆಧಾರವಾಗಿದ್ದ ಜಮೀನು ಕೂಡ ಕೈ ಬಿಟ್ಟು ಹೋಗುತ್ತದೆ. ದಗಲ್ಬಾಜಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ ಹಣವೂ ಹಿಂದಿರುಗದಿದ್ದಾಗ ಕಾಳಪ್ಪ ಶೂಲಗಂಬ ಏರುತ್ತಾನೆ.
ಬಿತ್ತನೆ ಬೀಜದ ಪರಾವಲಂಬನೆ, ಯಥೇಚ್ಛ ರಸಗೊಬ್ಬರ ಬಳಕೆ, ಕೀಟನಾಶಕ ಸಿಂಪಡಣೆಯಿಂದ ಜಮೀನಿಗೆ ಆಗುವ ಹಾನಿ, ಲೇಔಟ್‌ಗಳ ನಿರ್ಮಾಣ, ಗಣಿಗಾರಿಕೆಯಿಂದ ರೈತರು ಎದುರಿಸುವ ಸಂಕಟಗಳನ್ನೂ ನಾಟಕ ಎಳೆ ಎಳೆಯಾಗಿ ಬಿಚ್ಚಿಟ್ಟಿತು. ಸಾವಿನ ಮನೆಯಲ್ಲಿ ನಡೆಯುವ ರಾಜಕೀಯದ ವಿಡಂಬನೆ ಜತೆಗೆ ಉಚಿತ ಯೋಜನೆಗಳ ಬದಲಿಗೆ ದುಡಿಯಲು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಶಿಕ್ಷಣದಲ್ಲಿ ಕೃಷಿಗೆ ಒತ್ತು ನೀಡಬೇಕೆಂಬುದರ ಬಗ್ಗೆ ನಾಟಕ ಜಾಗೃತಿ ಮೂಡಿಸಿತು.
ಕಾಳಪ್ಪ, ಕಾಳಕ್ಕ ದಂಪತಿಯ ಪುತ್ರ ಸಂಜು ಪಾತ್ರಧಾರಿ ಅರಣ್ಯ ಕೃಷಿ, ಜೇನು ಸಾಕಣೆ ಹಾಗೂ ಸಾವಯವ ಪದ್ಧತಿ ಮೂಲಕ ಯಶಸ್ವಿಯಾಗುವ ಮೂಲಕ ನಾಟಕ ಸಮಾಪ್ತಿಗೊಳ್ಳುತ್ತದೆ. ರೈತ ದೇಶದ ಬೆನ್ನೆಲುಬು, ಆತ್ಮಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಸಾರಿದ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.