ಕೊಪ್ಪಳದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ 28ಕ್ಕೆ

MINALLI TAYANNA
ಮೀನಳ್ಳಿ ತಾಯಣ್ಣ
Published on

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಹಾಗೂ ಕಾರ್ಯಕರ್ತರ ಉಳಿವಿಗಾಗಿ ವರಿಷ್ಠರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಸೆ.28ರಂದು ಕೊಪ್ಪಳದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ನಾಲ್ಕು ಜಿಲ್ಲೆಗಳ ಸಭೆ ಆಯೋಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ, ಎಸ್ಟಿ ಮೋರ್ಚಾದ ನಾಯಕರಾದ ರಾಜಾವೆಂಕಟಪ್ಪ ನಾಯಕ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್‌ನಾಯ್ಕ ಸೇರಿ ರಾಜ್ಯದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಐದು ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರು ವಿಶ್ವಾಸವಿಟ್ಟು ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಅಭಿವೃದ್ಧಿ ಮರೆತಿದೆ. ಮಳೆ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ ಬರ ಕಾಮಗಾರಿ, ರೈತರಿಗೆ ಪರಿಹಾರ, ಬೆಳೆ ವೀಕ್ಷಣೆಗೆ ಮುಂದಾಗಿಲ್ಲ. ಸರ್ಕಾರದ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜೆಡಿಎಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಳ್ಳಾರಿಯನ್ನು ಸ್ವಚ್ಛ, ಸುಂದರ ಹಾಗೂ ಭ್ರಷ್ಟಾಚಾರ ರಹಿತ ನಗರ ಮಾಡುವೆ ಎಂದು ಭರವಸೆ ನೀಡಿ ಆಯ್ಕೆಯಾದ ಶಾಸಕರು, ಸಚಿವರು ನಂತರ ಮರೆತಿದ್ದಾರೆ. ನಗರದ ಬಹುತೇಕ ಕಡೆಗಳಲ್ಲಿ ಜೂಜು, ಇಸ್ಪೀಟ್, ಅಕ್ರಮ ಅಕ್ಕಿ ಸಾಗಣೆ, ಗಾಂಜಾ ವ್ಯವಹಾರ, ಕ್ರಿಕೆಟ್ ಬೆಟ್ಟಿಂಗ್‌ನಂತಹ ಅಕ್ರಮ ಚಟುವಟಿಕೆಗಳು ನಿರಂತರ ನಡೆದಿದ್ದು, ಅದಕ್ಕೆ ಕಡಿವಾಣ ಇಲ್ಲದಂತಾಗಿದೆ. ಇತ್ತೀಚೆಗೆ ಅಕ್ಕಿ ವ್ಯಾಪಾರಿಯೋಬ್ಬರನ್ನು ಹತ್ಯೆ ಮಾಡಲಾಗಿದೆ.

ಶರಬಯ್ಯ ಎಂಬ ವ್ಯಾಪಾರಿ ಮೇಲೆ ಅಕ್ಕಿ ವ್ಯಾಪಾರಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದು, ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಕ್ರಮ ಅಕ್ಕಿ ವ್ಯಾಪಾರಿಗಳಿಂದ ಹಲ್ಲೆ ನಡೆಯುತ್ತಿವೆ. ಬಹುತೇಕ ಇಲಾಖೆಗಳಲ್ಲಿ ಲಂಚ ನೀಡದಿದ್ದರೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ. ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net