ವಿತರಣೆಯಾಗದ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

Published on

ಬಳ್ಳಾರಿ ; ರಾಜ್ಯದಲ್ಲಿ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿ ಮೂರು ತಿಂಗಳು ಕಳೆದರೂ ಈವರೆಗೆ ಅಂಕಪಟ್ಟಿ ಪತ್ರ ವಿತರಣೆಯಾಗಿಲ್ಲ. ಇದರಿಂದ ಪದವಿ ಪೂರ್ವ ಪಿಯು, ಡಿಪ್ಲೋಮಾ ಹಾಗೂ ಇತರೆ ಕೋರ್ಸ್‌ಗಳ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ರಾಜ್ಯಾದ್ಯಂತ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿಯ ಮೂರು ಪರೀಕ್ಷೆಯಲ್ಲಿ ಒಟ್ಟು 7,96,795 ವಿದ್ಯಾರ್ಥಿಗಳು ಹಾಜರಾಗಿದ್ದು, ಇದರಲ್ಲಿ 6,37,196 ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ರಾಜ್ಯದ ಫಲಿಶಾಂಶ ಶೇ. 79.97 ರಷ್ಟು ಪಡೆದು ‘ಬಿ’ ಗ್ರೇಡ್ ಮಾನ್ಯತೆ ಪಡೆದಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಸೇರಿ ಒಟ್ಟು ಐದು ಜಿಲ್ಲೆಗಳು ಮಾತ್ರ ‘ಎ’ ಗ್ರೇಡ್ ಹಾಗೂ ಯಾದಗಿರಿ, ಕಲಬುರಗಿ ಮತ್ತು ರಾಯಚೂರು ಮೂರು ಜಿಲ್ಲೆ ‘ಸಿ’ ಗ್ರೇಡ್ ಮಾನ್ಯತೆ ಪಡೆದಿವೆ. ಉಳಿದ ರಾಜ್ಯದ ಎಲ್ಲ ಜಿಲ್ಲೆಗಳು ‘ಬಿ’ ಗ್ರೇಡ್‌ಗೆ ತೃಪ್ತಿಪಟ್ಟಿಕೊಂಡಿವೆ. ಈಗಾಗಲೇ ಮೂರು ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡು ಎರಡ್ಮೂರು ತಿಂಗಳು ಕಳೆದರೂ ಅಂಕಪಟ್ಟಿ ವಿತರಿಸಲು ಇಲಾಖೆ ವಿಳಂಬ ನೀತಿ ಅನುಸರಿಸುವುದರಿಂದ ಪಾಲಕರ ಅಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಮಕ್ಕಳು ರಾಜ್ಯದ ನಾನಾ ಜಿಲ್ಲೆಗಳ ಪ್ರತಿಷ್ಠಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ನಾನಾ ಕೋರ್ಸ್‌ಗಳ ಪ್ರವೇಶಾತಿ ಪಡೆದಿದ್ದಾರೆ. ಆರಂಭದಲ್ಲಿ ದಾಖಲಾತಿ ವೇಳೆ ಜಿರಾಕ್ಸ್ ಪ್ರತಿಗಳ ಅಂಕಪಟ್ಟಿ ಪಡೆದಿದ್ದಾರೆ. ಇನ್ನೂ ಕೆಲ ದಿನಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆಗಳು ಆರಂಭಗೊಳ್ಳಲಿದ್ದು ವಿದ್ಯಾರ್ಥಿಗಳ ದಾಖಲೆಗಳ ಸವಿವರಕ್ಕಾಗಿ ಮೂಲ ಅಂಕಪಟ್ಟಿ ಒದಗಿಸಿ ಎಂಬುದಾಗಿ ಕಾಲೇಜು ಆಡಳಿತ ಮಂಡಳಿ ಸೂಚಿಸಿದೆ. ಆದ್ದರಿಂದ, ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಾಲಕರು ಅಂಕಪಟ್ಟಿಗಳಿಗಾಗಿ ಶಾಲೆಗಳಿಗೆ ಅಲೆದಾಡುತ್ತಿದ್ದಾರೆ.

ಕೆಲ ಕೋರ್ಸ್‌ಗಳಿಗೆ ಕಡ್ಡಾಯ : ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಎರಡು ಮತ್ತು ಮೂರು ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಹುತೇಕ ವಿದ್ಯಾರ್ಥಿಗಳು ಡಿಪ್ಲೋಮಾ, ಐಟಿಐ ಕೋರ್ಸ್‌ಗಳತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ, ಪ್ರವೇಶಾತಿಗೆ ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿಯ ಮೂಲ ಅಂಕಪಟ್ಟಿ ವಿತರಿಸಬೇಕು ಎಂಬ ನಿಯಮದಿಂದ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ. ಅಲ್ಲದೆ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಾನಾ ಇಲಾಖೆಯಡಿ ಸರ್ಕಾರದಿಂದ ದೊರೆಯುವ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಹಾಗೂ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಕೆಗೆ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಮುಖ್ಯವಾಗಿ ಮೂಲ ಅಂಕಪಟ್ಟಿ ಅಗತ್ಯವಿದೆ. ಒಟ್ಟಾರೆ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಕೇವಲ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಪಟ್ಟಿಯಲ್ಲ. ಇದು ಭವಿಷ್ಯದ ಶಿಕ್ಷಣ, ಉದ್ಯೋಗ ಮತ್ತು ವೈಯಕ್ತಿಕ ಗುರುತಿನ ಪ್ರಮುಖ ದಾಖಲೆಯಾಗಿ ಉಳಿಯಲಿದೆ.

ಬಾಕ್ಸ್ : ರಾಜ್ಯ ಸರ್ಕಾರ ಮಕ್ಕಳ ಭವಿಷ್ಯದ ಸಲುವಾಗಿ ಮೂರು ಪರೀಕ್ಷೆಗಳನ್ನು ಆಯೋಜಿಸಿದೆ. ಮೊದಲನೇ ಪರೀಕ್ಷೆಯಲ್ಲಿ ಕೆಲ ವಿಷಯ ಪಾಸಾದ ವಿದ್ಯಾರ್ಥಿಗಳು ಎರಡು ಮತ್ತು ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲ ವಿಷಯಗಳ ಅಂಕಗಳನ್ನು ಒಂದೇ ಅಂಕಪಟ್ಟಿಯಲ್ಲಿ ನಮೂದಿಸಿ ಮುದ್ರಿಸುವುದರಿಂದ ಅಂಕಪಟ್ಟಿ ವಿತರಣೆಗೆ ವಿಳಂಬವಾಗಿದೆ ಎನ್ನಲಾಗಿದೆ.

ಕೋರ್ಟ್..... ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯ ಮೂರು ಪರೀಕ್ಷೆ ನಡೆಸಲಾಗಿದೆ. ಆದ್ದರಿಂದ, ಒಂದೇ ಅಂಕಪಟ್ಟಿಯಲ್ಲಿ ಎಲ್ಲ ವಿಷಯಗಳ ಅಂಕಗಳ ನಮೂದು ಹಿನ್ನೆಲೆ ವಿಳಂಬವಾಗಲಿದೆ. ಇನ್ನೂ ಒಂದು ವಾರದೊಳಗೆ ಎಲ್ಲ ವಿದ್ಯಾರ್ಥಿಗಳ ಕೈಗೆ ಅಂಕಪಟ್ಟಿ ಸೇರಲಿದೆ.

- ಉಮಾದೇವಿ, ಡಿಡಿಪಿಐ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net