ಶ್ರೀರಾಮುಲುಗೆ ಅಧಿಕಾರದ ಮದ ಏರಿದೆ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿಕೆ

B Nagendra
ನಾಗೇಂದ್ರ.
Published on

ಬಳ್ಳಾರಿ: ಧೀಮಂತ ನಾಯಕ ಸಿದ್ದರಾಮಯ್ಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಗುರವಾಗಿ ಮಾತಾಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮುಲುಗೆ ಅಧಿಕಾರದ ಮದ ಏರಿದೆ. ಅಧಿಕಾರ ಇದೆಯೆಂದು ದರ್ಪ ತೋರಿಸಬಾರದು. ಸಿದ್ದರಾಮಯ್ಯರಂಥ ನಾಯಕರ ಬಗ್ಗೆ ಹಗುರ ಮಾತಾಡುವ ಶ್ರೀರಾಮುಲು ಅವರೇ ನನಗೆ ಪೆದ್ದನಂತೆ ಕಾಣುತ್ತಾರೆ. ಯಾರು ಜೋಕರ್, ಯಾರು ರಾಜ ಎಂದು ಜನರು ಅವರಿಗೆ ತೋರಿಸಲಿದ್ದಾರೆ. ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಎಲ್ಲರಿಗೂ ಉತ್ತಮ ಯೋಜನೆ ನೀಡಿದ್ದಾರೆ. ಅಂಥವರಿಗೆ ಜೋಕರ್ ಎನ್ನುವುದಲ್ಲ ಸರಿಯಲ್ಲ ಎಂದರು.

ಸಿದ್ದರಾಮಯ್ಯರಂಥ ನಾಯಕರು ನೋಡಲು ಸಾಧ್ಯವಿಲ್ಲವೆಂದು ಖುದ್ದು ಶ್ರೀರಾಮಲು ಅವರೇ ಜಿಲ್ಲಾ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಈಗ ನೋಡಿದರೆ ಹೀಗೆ ಮಾತಾಡಿದ್ದಾರೆ. ಈಗ ಬಳ್ಳಾರಿಯಲ್ಲಿ ಭಾರತ್ ಜೋಡೋ ಸಮಾವೇಶದ ಯಶಸ್ವಿ ಆಗಿರುವುದನ್ನು ಕಂಡು ಬಿಜೆಪಿ ನಾಯಕರು ಜನಪ್ರತಿನಿಧಿಗಳು ಹತಾಶರಾಗಿದ್ದಾರೆ ಎಂದರು.

ಎಸ್ಟಿ ಸಮುದಾಯಕ್ಕಾಗಿ ಶ್ರೀರಾಮುಲು ಏನು ಮಾಡಿದ್ದಾರೆ ? ಎಸ್ಟಿ ಮೀಸಲಾತಿ ಇನ್ನೂ ಬಂದಿಲ್ಲ, ಸುಗ್ರೀವಾಜ್ಞೆ ಹೊರಡಿಸಿ ಎಂದು ಹೇಳಿದೆವು. ಮೀಸಲಾತಿ ಕೆಲಸ ಆಗಿದ್ದರೆ ವಾಲ್ಮೀಕಿ ಶ್ರೀಗಳು ಏಕೆ ಧರಣಿ ಮುಂದುವರಿಸಿದ್ದಾರೆ ? ಮೀಸಲಾತಿ ಕೆಲಸ ಪೂರ್ಣ ಆಗಬೇಕಾದರೆ ಸಮಯ ಹಿಡಿಯುತ್ತದೆ. ಮೀಸಲಾತಿ ನೀಡಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಬಿಜೆಪಿಯವರದು ಪ್ರಚಾರದ ಮ್ಯಾನೇಜ್‌ಮೆಂಟ್ ಚೆನ್ನಾಗಿದೆ. ಇದನ್ನು ಮಾಡಿಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಬಳ್ಳಾರಿಯಲ್ಲಿ ಭಾರತ್ ಜೋಡೋ ಯಾತ್ರೆ ಮತ್ತು ಬಹಿರಂಗ ಸಮಾವೇಶ ಅಭೂತಪೂರ್ವ ಯಶ ಕಂಡಿದೆ. ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ 15 ತಾಲೂಕುಗಳಿಂದ ಲಕ್ಷಾಂತರ ಜನರು ಭಾಗವಹಿಸಿದ್ದಾರೆ. ಅವರಿಗೆಲ್ಲ ವ್ಯವಸ್ಥೆ ಮಾಡಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳಾಗಿವೆ. ಆದರೆ, ತಮ್ಮೆಲ್ಲರ ಸಹಕಾರದಿಂದ ಜೋಡೋ ಯಾತ್ರೆ ಯಶಸ್ವಿಯಾಗಿದೆ ಎಂದರು. ಮೇಯರ್ ಎಂ.ರಾಜೇಶ್ವರಿ, ಮುಖಂಡರಾದ ಸುನೀಲ್ ರಾವೂರ್, ಅಲ್ಲಂ ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net