ಶ್ರೀ ರಾಘವೇಂದ್ರ ತೀರ್ಥ ಗುರುಸರ್ವಭೌಮರ ಉತ್ತರಾರಾಧನೆ

Published on

ಬಳ್ಳಾರಿ : ನಗರದ ಸತ್ಯನಾರಾಯಣ ಪೇಟೆಯಲ್ಲಿ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮೀಜಿ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸರ್ವಭೌಮರ 354ನೇ ಆರಾಧನೆ ಮಹೋತ್ಸವ ನಿಮಿತ್ತ ಬುಧವಾರ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶ್ರೀ ಗುರುರಾಯರ ಉತ್ತರಾರಾಧನೆ ನಿಮಿತ್ತ ಬೆಳಗ್ಗೆ ನೂರಾರು ಭಕ್ತರ ಮಧ್ಯೆ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ವಿವಿಧ ಭಜನಾ ಮಂಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ಡೊಳ್ಳು ಕುಣಿತ ಗಮನಸೆಳೆಯಿತು. ನೆರೆದ ನೂರಾರು ಭಕ್ತರು ಕೇಸರಿ ಬಣ್ಣ ಎರಚಿ ಶ್ರಿಗುರುರಾಯರ ನಾಮ ಸ್ಮರಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಶ್ರೀಮಠದಲ್ಲಿ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ್ ಹಾಗೂ ಜ್ಯೋತಿಷಿ ಪಂ.ಗುರುರಾಜ ಆಚಾರ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ಶ್ರೀ ಹರಿವಾಯುಸ್ತುತಿ ಮಂತ್ರ ಪಠಣ, ವಿಶೇಷ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ, ಹಸ್ತೊದಕ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಶ್ರೀ ಗುರುರಾಯರ ದರ್ಶನ ಪಡೆದು, ಭಕ್ತಿ ಸಮರ್ಪಿಸಿದರು. ಆಗಮಿಸಿದ ಎಲ್ಲರಿಗೂ ತೀರ್ಥ, ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net