ಬಳ್ಳಾರಿ : ಕೇಂದ್ರ ಸರ್ಕಾರವು ಉದ್ಯೋಗ ಆಧಾರಿತ ಪ್ರೋತ್ಸಾಹಧನ ಇಎಲ್‌ಐ ಯೋಜನೆಗೆ ಅನುಮೋದನೆ ನೀಡಿದೆ. ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವ ಉದ್ದೇಶವಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವಿ.ಪ್ರವೀಣ ಹೇಳಿದರು.
ನಗರದಲ್ಲಿ ಇಪಿಎಫ್‌ಒ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ವಲಯ ಮತ್ತು ಇತರೆ ವಲಯಗಳ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗಿಗಳಿಗೆ ಕೆಲಸ ನೀಡಿದ ಉದ್ಯೋಗದಾತರ ಇಬ್ಬರಿಗೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. 2025 ರ ಆ. 01 ರಿಂದ 2027 ರ ಜುಲೈ 31 ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
ಇಪಿಎಫ್‌ಓ ಕಚೇರಿ ವತಿಯಿಂದ ಈಗಾಗಲೇ ಪ್ರತಿ ತಿಂಗಳು ಆಯೋಜಿಸುತ್ತಿರುವ ನಿಧಿ ಆಪ್ಕೆ ನಿಕೆಟ್ ಕಾರ್ಯಕ್ರಮದಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಲಾಗುತ್ತಿದೆ. ತಾಲೂಕು ಮಟ್ಟದ ಜಾಗೃತಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರಾದೇಶಿಕ ಕಚೇರಿಯ ಆರ್ಥಿಕ ನಿರ್ವಹಣಾಧಿಕಾರಿ ಕೆ.ಎಸ್.ವೇಣುಗೋಪಾಲ್, ಸಹಾಯಕ ಆಯುಕ್ತ ಟಿ.ನಂದನ್ ಸಿಂಗ್ ಇದ್ದರು.