ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಸಕಲ ಸಿದ್ಧತೆ

BLY-27-2
ಬಳ್ಳಾರಿ ನಗರದಲ್ಲಿರುವ ಶ್ರೀ ಕನಕ ದುರ್ಗಮ್ಮದ ಆವರಣದಲ್ಲಿ ಭಕ್ತರಿಗಾಗಿ ನೆರಳಿನ ವ್ಯವಸ್ಥೆ ಮಾಡಿರುವುದು.
Published on

ಬಳ್ಳಾರಿ: ನಗರದ ಆರಾಧ್ಯ ದೈವ ಶ್ರೀಕನಕ ದುರ್ಗಮ್ಮ ದೇವಿಯ ಆವರಣದಲ್ಲಿ ಐತಿಹಾಸಿಕ ಸಿಡಿಬಂಡಿ ರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಫೆ.28ರಂದು ಸಂಜೆ ನಡೆಯಲಿರುವ ಸಿಡಿಬಂಡಿ ರಥೋತ್ಸವದ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಭಕ್ತರು ದೇವಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ಆಗಮಿಸಲು ಅವರಿಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆವರಣದ ಸುತ್ತಮುತ್ತ ಸಿಸಿ ಟಿವಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ.ಲಕ್ಷಾಂತರ ಭಕ್ತರು ಸೇರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಗ್ಗೆ ಸಣ್ಣ ದುರ್ಗಮ್ಮ ದೇವಸ್ಥಾನದಿಂದ ಕನಕ ದುರ್ಗಮ್ಮ ಗುಡಿಯವರೆಗೆ ಮೇಟಿ ಕುಂಭ ಪೂಜೆ, ಮಧ್ಯಾಹ್ನ 2ಗಂಟೆಗೆ ಗಾಣಿಗ ಸಮಾಜದವರಿಂದ ನೈವೇದ್ಯ, ರಾತ್ರಿ 10 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಊರು ಹಬ್ಬದ ರೀತಿ ಆಚರಣೆ: ಸಿಡಿಬಂಡಿ ರಥೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ಊರಿನ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತದೆ. ಸಿಡಿಬಂಡಿ ರಥವನ್ನು ಗಾಣಿಗ ಸಮಾಜದವರು ಕೌಲ್ ಬಜಾರ್‌ನಿಂದ ದೇವಸ್ಥಾನಕ್ಕೆ ತರುತ್ತಾರೆ. ಸಂಜೆ 5.30ಕ್ಕೆ ಮೂರು ಜತೆ ಎತ್ತುಗಳ ಮೂಲಕ ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕಲಾಗುತ್ತದೆ. ದೇವಸ್ಥಾನಕ್ಕೆ ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ.

ಇದನ್ನೂ ಓದಿ:

ದಿನವಿಡೀ ಅನ್ನದಾಸೋಹ: ಬಳ್ಳಾರಿ ಜಿಲ್ಲೆ ಅಲ್ಲದೆ ನೆರೆಜಿಲ್ಲೆಗಳಿಂದಲೂ ಭಕ್ತರು ಸಿಡಿಬಂಡಿ ರಥೋತ್ಸವ ನೋಡಲು ಆಗಮಿಸುತ್ತಾರೆ. ಅವರಿಗಾಗಿ ಫೆ.28ರಂದು ಬೆಳಗ್ಗೆಯಿಂದಲೇ ದಿನವಿಡೀ ಅನ್ನದಾಸೋಹ ಹಮ್ಮಿಕೊಳ್ಳಲಾಗಿದೆ. ಪಾಯಸ, ಅನ್ನ, ಸಾಂಬಾರ್, ಪಲ್ಯೆ, ಮಜ್ಜಿಗೆ, ಚಿತ್ರನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದೇವಸ್ಥಾನದ ಕಮಿಟಿ ಉಸ್ತುವಾರಿವಹಿಸಿಕೊಂಡಿದೆ.

ಚಿನ್ನ, ಬೆಳ್ಳಿ ಅರ್ಪಣೆ: ಪ್ರತಿವರ್ಷವೂ ಕನಕದುರ್ಗಮ್ಮ ದೇವಿಗೆ ಭಕ್ತರು ಚಿನ್ನ, ಬೆಳ್ಳಿ ಸಮರ್ಪಿಸಿ ಹರಕೆಯನ್ನು ತೀರಿಸುತ್ತಾರೆ. ದೇವಿಗೆ ವರ್ಷದಲ್ಲಿ ಐದು ಬಾರಿ ಚಿನ್ನಾಭರಣಗಳಿಂದ ಅಲಂಕರಿಸಲಾಗುತ್ತದೆ. ಸಿಡಿಬಂಡಿ ರಥೋತ್ಸವ, ದಸರಾ, ನವರಾತ್ರಿ, ಯುಗಾದಿ, ವರಲಕ್ಷ್ಮಿ ವ್ರತ ಇದ್ದಾಗ ವಿಶೇಷವಾಗಿ ದೇವಿಗೆ ಅಲಂಕಾರ ಮಾಡಲಾಗುತ್ತದೆ.

ಪೂರ್ವಜರಿಂದಲೂ ಸಿಡಿಬಂಡಿ ರಥೋತ್ಸವ ನೆರವೇರಿಸುತ್ತ ಬರದಲಾಗಿದೆ. ಕಳೆದ ಮೂರು ವರ್ಷಗಳ ಕಾಲ ಕರೊನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ. ಈ ಬಾರಿ 2 ಲಕ್ಷಕ್ಕೂ ಅಧಿಕ ಭಕ್ತರು ಸೇರಿರುವ ನಿರೀಕ್ಷೆ ಇದೆ. ಅವರಿಗೆ ಯಾವುದೇ ತೊಂದರೆ ಆಗದಂತೆ ದೇವಸ್ಥಾನ ಸಮಿತಿಯಿಂದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ.| ಪಿ.ಎಂ.ರಾಜಶೇಖರ್, ಪ್ರಧಾನ ಧರ್ಮಕರ್ತರು, ಶ್ರೀ ಕನಕ ದುರ್ಗಮ್ಮ ದೇವಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net